ಮುಳ್ಳೂರು, ಸೆ. ೩೦: ಗಣೇಶ ಚತುರ್ಥಿ ಪ್ರಯುಕ್ತ ಸಮೀಪದ ಮುಳ್ಳೂರು ಗ್ರಾಮದ ಗೆಳೆಯರ ಬಳಗದ ವತಿಯಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಗೌರಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗದ ನಂತರ ವಾಹನದಲ್ಲಿ ಅಲಂಕೃತ ಮಂಟಪದಲ್ಲಿ ಗೌರಿ ಮೂರ್ತಿ ಮತ್ತು ೮ ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಕೂರಿಸಲಾಯಿತು.
ಬಳಿಕ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶೋಭಾಯಾತ್ರೆ ನಡೆಸಲಾಯಿತು. ಸಂಜೆ ಗ್ರಾಮದ ಗುದ್ದಲಿ ಕೆರೆಯಲ್ಲಿ ಗೌರಿ-ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಗಣೇಶೋತ್ಸವ ಮೆರವಣಿಗೆಯಲ್ಲಿ ಗ್ರಾಮದ ಪುರುಷರು, ಮಹಿಳೆಯರು, ಯುವಕ-ಯುವತಿಯರು, ಹಿರಿಯರು, ಮಕ್ಕಳು ಬೇಧಭಾವ ಇಲ್ಲದೆ ಪಾಲ್ಗೊಂಡಿದ್ದರು.
ಗ್ರಾಮದ ಅರ್ಚಕ ಶರತ್ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಗೆಳೆಯರ ಬಳಗದ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ಸಂತೋಷ್, ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.