ಮಡಿಕೇರಿ, ಅ. ೧: ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ತಾ. ೪ ರಿಂದ ೧೨ ರವರೆಗೆ ಪ್ರತಿನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.
ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ಮತ್ತು ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ ಮಾರ್ಗದರ್ಶನದಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ. ಮತ್ತು ಖಜಾಂಚಿ ಅರುಣ್ ಶೆಟ್ಟಿ, ಪೌರಾಯುಕ್ತ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕುಮಾರ್, ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಈ ಬಾರಿಯ ದಸರಾದಲ್ಲಿ ಜನಮನ ಸೆಳೆಯಲಿವೆ ಎಂದು ಅನಿಲ್ ತಿಳಿಸಿದ್ದಾರೆ.
ಪ್ರತಿದಿನ ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಕ್ಕಳ, ಮಹಿಳಾ ದಸರಾ, ಜಾನಪದೋತ್ಸವ, ಕಾಫಿ ದಸರಾದಂದು ಬೆಳಿಗ್ಗಿನಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ.
ಚೊಚ್ಚಲ ಬಾರಿಗೆ ಕಾಫಿ ದಸರಾ
ತಾ. ೬ ರಂದು ಡಾ. ಮಂತರ್ ಗೌಡ ಮಾರ್ಗದರ್ಶನದಲ್ಲಿ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ, ಪಶು ವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾವನ್ನು ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದೆ. ಗಾಂಧಿ ಮೈದಾನದ ಗ್ಯಾಲರಿಯೊಳಗೆ ೩೨ ಮಳಿಗೆಗಳಲ್ಲಿ ಕಾಫಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬAಧಿತ ಮಾಹಿತಿ ಪ್ರದರ್ಶನ, ವೇದಿಕೆಯಲ್ಲಿ ಕಾಫಿ ಮತ್ತು ಕೃಷಿಗೆ ಸಂಬAಧಿಸಿದAತೆ ವಿಷಯ ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದೆ. ತಾ. ೭ ರ ಬೆಳಿಗ್ಗೆ ೧೦ ಗಂಟೆಯಿAದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ. ವೇದಿಕೆಯಲ್ಲಿ ಕಾಫಿ, ಕೃಷಿ ಸಂಬAಧಿತ ಮಹತ್ವದ ವಿಚಾರ ಸಂಕಿರಣ ಆಯೋಜಿತವಾಗಿದೆ ಎಂದು ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ದಸರಾ
ತಾ. ೮ ರಂದು ಏಳನೇ ವರ್ಷದ ಮಹಿಳಾ ದಸರಾ ಅಂಗವಾಗಿ ಬೆಳಿಗ್ಗೆ ೧೦ ಗಂಟೆಯಿAದಲೇ ಮಹಿಳೆಯರಿಗಾಗಿ ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಆಯೋಜಿತವಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಮೆಹಂದಿ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭ ಡ್ಯಾನ್ಸ್, ವಾಲಗತ್ತಾಟ್, ನಾರಿಗೆ ಒಂದು ಸೀರೆ, ಕಪ್ಪೆಜಿಗಿತ, ಕೇಶ ವಿನ್ಯಾಸ, ಒಂಟಿ ಕಾಲಿನ ಓಟದ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿವೆ. ಬೆಂಗಳೂರಿನ ಹೇಮ ವೆಂಕಟ್ ಅವರಿಂದ ದಾರದಲ್ಲಿ ದುರ್ಗೆಯ ಚಿತ್ರರಚನೆಯ ಆಕರ್ಷಣೆ, ಪೊನ್ನಂಪೇಟೆಯ ರೇಖಾ ಶ್ರೀಧರ್ ತಂಡದಿAದ ನೃತ್ಯ ಆಯೋಜಿಸಲ್ಪಟ್ಟಿದೆ.
ಜಾನಪದ ದಸರಾ
ತಾ. ೧೦ ರಂದು ಬೆಳಿಗ್ಗೆ ೯.೩೦ ರಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ೫ನೇ ವರ್ಷದ ಜಾನಪದ ದಸರಾ ನಡೆಯಲಿದೆ. ಜಿಲ್ಲೆ ಮತ್ತು ಹೊರಜಿಲ್ಲೆಗಳ ಜಾನಪದ ಕಲಾತಂಡಗಳ ಜಾಥಾ ಜನರಲ್ ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನದವರೆಗೆ ಸಾಗಲಿದ್ದು, ಕಲಾಸಂಭ್ರಮ ವೇದಿಕೆಯಲ್ಲಿ ಕಲಾ ತಂಡಗಳಿAದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ಆಯೋಜಿತವಾಗಿದೆ, ಇದೇ ಸಂದರ್ಭ ಪೊನ್ನಚ್ಚನ ಮಧುಸೂಧನ್ ಸಂಗ್ರಹದ ಜಾನಪದ ಪರಿಕರಗಳ ಪ್ರದರ್ಶನ ಕೂಡ ಆಯೋಜಿತವಾಗಿದೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ನೆರವಿಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.