ಮಡಿಕೇರಿ, ಅ.೧ : ೭ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿ ಆರ್ಥಿಕ ತಾರತಮ್ಯವನ್ನು ಸರಿಪಡಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

೨೦೨೨ರ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ ೬ನೇ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ಕ್ರಮದಿಂದ ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾಗಿದೆ. ಸರ್ಕಾರ ತಕ್ಷಣ ೨೦೨೨ರ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಅವಧಿಯೊಳಗೆ ನಿವೃತ್ತಿಯಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಪಿ.ಎಸ್.ಜನಾರ್ಧನ ಒತ್ತಾಯಿಸಿದರು.

ಜಿಲ್ಲಾ ಸಂಚಾಲಕರುಗಳಾದ ಜಿ.ಎಂ. ಚಿನ್ನಯ್ಯ, ರಂಜಿತ್ ಕೆ.ಯು, ಶಿವಕುಮಾರ್ ಸಿ.ಕೆ, ಎಂ.ಪಿ. ನಾಣ್ಯಪ್ಪ, ಪದಾಧಿಕಾರಿಗಳಾದ ಪಿ.ಪಿ.ಇಂದಿರಾ, ಎಂ.ಜೆ. ಗಂಗಮ್ಮ, ಅವನಿಜ ಕೆ.ಕೆ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದದರು.