ಸೋಮವಾರಪೇಟೆ, ಸೆ. ೨೯: ಜಿಲ್ಲೆಯ ತಿತಿಮತಿ ಸಮೀಪದ ಹೆಬ್ಬಾಲೆ ಪಟ್ಟಣ ಸ.ಹಿ.ಪ್ರಾ. ಶಾಲೆಗೆ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಮನೂಭಾಯಿ ಅವರು ರೂ. ೫೦ ಸಾವಿರ ವೆಚ್ಚದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ವಿವಿಧ ಪರಿಕರಗಳನ್ನು ವಿತರಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಇದೇ ಶಾಲೆಯಲ್ಲಿ ಪೂರೈಸಿದ್ದ ಮನೂಭಾಯಿ ಅವರು ತಮ್ಮ ಪೋಷಕರ ಜ್ಞಾಪಕಾರ್ಥವಾಗಿ ಶಾಲಾ ಮಕ್ಕಳಿಗೆ ರೂ.೫೦ ಸಾವಿರ ವೆಚ್ಚದಲ್ಲಿ ಊಟದ ತಟ್ಟೆ, ಲೋಟ ಹಾಗೂ ಬರವಣಿಗೆಯ ನೋಟ್ ಪುಸ್ತಕ ಹಾಗೂ ಜಾಮಿಟ್ರಿ ಬಾಕ್ಸ್, ಪೆನ್ನು, ಪೆನ್ಸಿಲ್, ಸ್ಕೇಲ್‌ಗಳನ್ನು ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭ ಮನೂಭಾಯಿ ಅವರನ್ನು ಶಾಲಾಡಳಿತ ಮಂಡಳಿ ಹಾಗೂ ಶಿಕ್ಷಕರ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅಪ್ರೋಜ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಮಾರ, ಶಿಕ್ಷಕರು, ಅಡುಗೆ ಸಿಬ್ಬಂದಿಯವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.