ಚೆಯ್ಯAಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಮುಖ್ಯ ಶಿಕ್ಷಕಿ ಹೆಚ್.ಆರ್. ಪ್ರೇಮಾಕುಮಾರಿ, ಸಂಪನ್ಮೂಲ ಅಧಿಕಾರಿ (ಸಿಆರ್‌ಪಿ) ಪವಿತ್ರ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಚೆಯ್ಯಂಡಾಣೆ ಕ್ಲಸ್ಟರ್ ವ್ಯಾಪ್ತಿಗೆ ಒಳಪಟ್ಟ ೧೫ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು ೧೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ಹಾಡು, ಭಕ್ತಿಗೀತೆ, ಭರತನಾಟ್ಯ, ಗಾದೆ, ಛದ್ಮವೇಷ, ಮಣ್ಣಿನ ಕಲಾಕೃತಿ, ಕರಕುಶಲ ಕಲಾಕೃತಿ, ಚಿತ್ರಕಲೆ, ಕವಾಲಿ ಸೇರಿದಂತೆ ಹಲವಾರು ಸ್ಪರ್ಧೆಗಳು ಜರುಗಿತು. ಇದರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ವಿತರಿಸಿದರು. ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ರತ್ನಾ, ಉಪಾಧ್ಯಕ್ಷೆ ಲಲಿತ, ನರಿಯಂದಡ ಕೇಂದ್ರ ಪ್ರೌಢ ಶಾಲೆಯ ಶಿಕ್ಷಕಿ ಸುನಿತಾ, ಕಡಂಗ ಸ.ಹಿ. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಿಕುಮಾರಿ, ಕ್ಲಸ್ಟರ್‌ಗೆ ಒಳಪಟ್ಟ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ ವೃಂದದವರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.

ಚೇರಂಬಾಣೆ ಕ್ಲಸ್ಟರ್ ನಾಪೋಕ್ಲು: ಚೇರಂಬಾಣೆ ಕ್ಲಸ್ಟರ್‌ನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಚೇರಂಬಾಣೆ ಅರುಣಾ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿಲನ ಮುತ್ತಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀಣಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಇಲಾಖೆ ರೂಪಿಸಿದ ಒಂದು ವಿನೂತನ ಕಾರ್ಯಕ್ರಮ. ಶಿಕ್ಷಣ ಕ್ಷೇತ್ರದಲ್ಲಿ ಕಲೆಯನ್ನು ಉತ್ತೇಜಿಸುವ ಮೂಲಕ ಎಲ್ಲಾ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರ ತರುವಂತಹ ಒಂದು ಉತ್ತಮ ವೇದಿಕೆಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ೨೦೦ ಮಕ್ಕಳು ೪೭ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ೪೭ ಮಕ್ಕಳು ತಾಲೂಕುಮಟ್ಟಕ್ಕೆ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಪಾಕ ದೇವಸ್ಥಾನದ ಅಧ್ಯಕ್ಷ ಎಂ.ಎನ್. ಮಾದಪ್ಪ, ವಾಹನ ಮಾಲೀಕರ ಸಂಘದ ಅಧ್ಯಕ್ಷ ರವಿ, ಮಸೀದಿ ಅಧ್ಯಕ್ಷ ಹಸೈನಾರ್ ಹಾಗೂ ಇತರರು ಇದ್ದರು.

ಮಾದಾಪುರ ಕ್ಲಸ್ಟರ್ ಸುಂಟಿಕೊಪ್ಪ: ಮಾದಾಪುರ ಎಸ್.ಜೆ.ಎಂ. ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್.ಜೆ.ಎಂ. ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುರುಗ ಮಠ ಮೋಕ್ಷಪತಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಮಾನಾಥಪುರ ಆಯುರ್ವೇದಿಕ್ ಆಸ್ಪತ್ರೆ ಡಾ. ಹರ್ಷ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಸಂದರ್ಭದಲ್ಲಿ ಅತಿಥಿಗಳು, ಶಿಕ್ಷಕರು ಹಾಗೂ ಪೋಷಕರು ಹೇಳುವ ಮಾತುಗಳಿಂದ ಕಿರಿಕಿರಿ ಉಂಟಾಗುವ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಆದರೆ ಮುಂದಿನ ಭವಿಷ್ಯದಲ್ಲಿ ಈ ಮಾತುಗಳು ಬದುಕಿನ ದಾರಿ ದೀಪವಾಗಲಿದೆ ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕ ಪೆಮ್ಮಯ್ಯ, ಪ್ರೊ-ಕಬಡ್ಡಿ ಆಟಗಾರ ಅವಿನಾಶ್, ಸುಂಟಿಕೊಪ್ಪ ಉದ್ಯಮಿ ಅನೂಪ್, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಮುಖ್ಯ ಶಿಕ್ಷಕಿ ಪ್ರಜ್ಞಾ, ಶಾಲಾ ಆಡಳಿತ ಮಂಡಳಿಯ ಅನಿಶ್‌ಕುಮಾರ್, ಕುಮಾರ್, ಪ್ರದೀಶ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.

ಕ್ಲಸ್ಟರ್ ವಿಭಾಗದ ೧೫ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ವಿಜೇತ ಮಕ್ಕಳಿಗೆ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮಂಜುನಾಥ್ ಪ್ರಮಾಣ ಪತ್ರ ನೀಡಿದರು.