ಮಡಿಕೇರಿ, ಸೆ. ೨೯: ಭಾರತೀಯ ಜನತಾ ಪಕ್ಷವು ಕಾರ್ಯಕರ್ತರ ಪಕ್ಷವಾಗಿದೆ, ಕಾರ್ಯಕರ್ತರಿಂದ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಬೂತಗಳಲ್ಲಿ ಸಂಘಟಿತರಾಗಿ ಪಕ್ಷಕ್ಕೆ ಹೊಸಬರನ್ನು ಕರೆತಂದು ಸದಸ್ಯತಾ ಅಭಿಯಾನವನ್ನು ಯಶಸ್ವಿಗೊಳಿಸಲು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಕರೆ ನೀಡಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸದಸ್ಯತಾ ಅಭಿಯಾನವನ್ನು ಉದ್ದೇಶಿಸಿ, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.

ದೇಶಪ್ರೇಮ, ಧರ್ಮಾಭಿಮಾನ ಇದ್ದವರು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ನಮ್ಮ ಪಕ್ಷವು ಕಾರ್ಯಕರ್ತರಲ್ಲಿ ನಾಯಕತ್ವದ ಗುಣಗಳನ್ನು ತುಂಬುವು ಪಕ್ಷವಾಗಿದೆ. ನಾನೇ ೨೦೧೪ಕ್ಕಿಂತ ಮುಂಚೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಪಕ್ಷವು ವಹಿಸಿದ್ದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿದ ಮೇಲೆ ಸಂಸದನಾಗಿ ಮಾಡಿತ್ತು. ಇಂದು ಸದಸ್ಯತಾ ಅಭಿಯಾನದ ಜವಬ್ದಾರಿಯನ್ನು ನೀಡಿದೆ. ಅದರಂತೆ ಬೀದರ್‌ನಿಂದ ಕೊಡಗಿನವರೆಗೆ ಬಂದಿರುವೆ. ನನ್ನಂತೆ ಲಕ್ಷಾಂತರ ಕಾರ್ಯಕರ್ತರು ಅವರಿಗೆ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ ಇದುವೇ ನಮ್ಮ ಪಕ್ಷದ ಸಂಸ್ಕೃತಿ ಎಂದರು.

ಎಲ್ಲರೂ ಪಕ್ಷವು ತಮಗೆ ನೀಡಿರುವ ಈ ಸದಸ್ಯತಾ ಅಭಿಯಾನದ ಜವಾÀಬ್ದಾರಿಯನ್ನು ಅಚ್ಚುಕಟ್ಟಾಗಿ ನಿಬಾಯಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸದಸ್ಯರನ್ನು ಪಕ್ಷಕ್ಕೆ ಕರೆತರುವಲ್ಲಿ ಶ್ರಮಿಸಬೇಕೆಂದು ಹೇಳಿದರು. ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸದಸ್ಯತಾ ಅಭಿಯಾನಕ್ಕೆ ಮೊದಲನೆ ದಿನದಿಂದ ಹಗಲಿರುಳು ಶ್ರಮಿಸುತ್ತಿದ್ದೇವೆ. ಪಕ್ಷದ ಬೆಳವಣಿಗೆಯಲ್ಲಿಯೆ ನಮ್ಮ ಬೆಳವಣಿಗೆಯಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಇನ್ನು ಹೆಚ್ಚಿನ ಸದಸ್ಯರನ್ನು ಪಕ್ಷಕ್ಕೆ ಕರೆತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಕಾಂಗೀರ ಸತೀಶ್, ಕಾರ್ಯಕರ್ತರು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.