ಮಡಿಕೇರಿ, ಸೆ. ೩೦: ಮಡಿಕೇರಿಯ ೪ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯವು ೯೪ನೇ ವರ್ಷದ ಅದ್ದೂರಿ ದಸರಾ ಉತ್ಸವದ ಸಿದ್ದತೆಯಲ್ಲಿದ್ದು, ತಾ. ೩ರಿಂದ ೧೨ರವರೆಗೆ ವಿಶೇಷ ಅಲಂಕಾರ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಅಲಂಕಾರ ಸಮಿತಿಯ ಅಧ್ಯಕ್ಷ ರಂಜಿತ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವದ ಅಂಗವಾಗಿ ದೇವಾಲಯದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ತಾ. ೩ರಂದು ಬೆಳ್ಳಿಯ ಅಲಂಕಾರ, ತಾ.೪ ರಂದು ಹೂವಿನ ಅಲಂಕಾರ, ತಾ. ೫ರಂದು ಬೇವಿನ ಅಲಂಕಾರ, ಇದೇ ಮೊದಲ ಬಾರಿಗೆ ವಿಶೇಷ ಖಾದ್ಯಗಳ ಅಲಂಕಾರ ಏರ್ಪಡಿಸಿದ್ದು, ತಾ. ೬ರಂದು ಚಕ್ಕುಲಿ, ಕೋಡುಬಳೆ, ಪುರಿಉಂಡೆ ಇತ್ಯಾದಿಗಳನ್ನು ಭಕ್ತರು ದೇವಿಗೆ ಅರ್ಪಿಸಬಹುದು. ತಾ. ೭ರಂದು ನಿಂಬೆ ಹಣ್ಣಿನ ಅಲಂಕಾರ, ತಾ. ೮ರಂದು ಮಹಾಲಕ್ಷಿö್ಮ ಅಲಂಕಾರ, ತಾ. ೯ರಂದು ಶಾರದಾ ದೇವಿಯ ಅಲಂಕಾರ, ತಾ. ೧೦ರಂದು ಬಳೆಯ ಅಲಂಕಾರ, ತಾ. ೧೧ರಂದು ಹಣ್ಣಿನ ಅಲಂಕಾರ, ತಾ. ೧೨ರಂದು ವಜ್ರದ ಅಲಂಕಾರ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ತಾ.೪ರಂದು ಸಂಜೆ ದೇವಾಲಯದಲ್ಲಿ ದುರ್ಗಾ ಹೋಮ, ೮ರಂದು ಕಲ್ಪೋಕ್ತ ಪೂಜೆ, ೧೦ರಂದು ದುರ್ಗಾ ದೀಪ ನಮಸ್ಕಾರ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಗೌರವಾಧ್ಯಕ್ಷ ಜೇಮ್ಸ್, ಗೌರವ ಸಲಹೆಗಾರ ಉದಯ್ ಕುಮಾರ್ ಹಾಜರಿದ್ದರು.