ಪೊನ್ನಂಪೇಟೆ, ಸೆ. ೩೦: ಮೈಸೂರಿನ ಓಡಿಪಿ ಸಂಸ್ಥೆ ವತಿಯಿಂದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜೋಡುಬೀಟಿ ಅಂಗನವಾಡಿ ಕೇಂದ್ರ ಹಾಗೂ ತ್ಯಾಗರಾಜ ರಸ್ತೆ ಅಂಗನವಾಡಿ ಕೇಂದ್ರಗಳಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಆರೋಗ್ಯ ಇಲಾಖೆ ಕಾರ್ಯಕರ್ತೆ ಆಶಾರಾಣಿ ಮತ್ತು ರೂಪ ಅವರು ಮಾತನಾಡಿ ಡೆಂಗ್ಯೂ ರೋಗದ ಬಗ್ಗೆ ಮಾಹಿತಿ ನೀಡಿ, ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮನೆಯ ಹೊರಭಾಗ ಶುದ್ಧವಾದ ನೀರು ಶೇಖರಿಸಿಡುವುದನ್ನು, ಹೂಕೊಂಡ ಗಳಲ್ಲಿ ನೀರು ಶೇಖರಣೆಗೊಳ್ಳದಂತೆ, ವಾಹನದ ಟೈಯರ್, ತೆಂಗಿನಕಾಯಿ ಚಿಪ್ಪುಗಳಲ್ಲಿ ನೀರು ಶೇಖರಣೆ ಗೊಳ್ಳದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದರು.
ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು, ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಣ ಮಾಡುವಂತೆ ತಿಳಿಸಿದರು.
ನಂತರ ಅಂಗನವಾಡಿಗಳ ಸುತ್ತಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಯಿತು. ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಸಿಬ್ಬಂದಿ ಅಕ್ಷಯ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ಆಶಾಕಾರ್ಯಕರ್ತೆ ಭವಾನಿ, ಓಡಿಪಿ ಸಂಸ್ಥೆಯ ಸದಸ್ಯರಾದ ಲಲಿತ, ಪೊನ್ನಮ್ಮ, ಧರಣಿ, ರಂಜಿನಿ, ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.