ಕುಶಾಲನಗರ, ಸೆ. ೨೯: ಕುಶಾಲನಗರದಲ್ಲಿ ನಡೆದ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಗಳಿಗೆ ಕೆಲವು ನಿಯಮಗಳಿಂದ ಅಸಮಾಧಾನಕ್ಕೆ ಕಾರಣವಾಯಿತು.

ಕುಶಾಲನಗರದ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸ್ಥಳೀಯ ಕನ್ನಡ ಭಾರತಿ ಕಾಲೇಜು ಕೇಂದ್ರಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಲಿಖಿತ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪರೀಕ್ಷಾ ಕೇಂದ್ರಕ್ಕೆ ಒಳಹೋಗುವ ಮಹಿಳಾ ಅಭ್ಯರ್ಥಿಗಳಿಗೆ ಮೂಗು ಬೊಟ್ಟು, ಕಾಲುಂಗುರ, ಕಿವಿ ಓಲೆ ಮುಂತಾದವುಗಳನ್ನು ತೆಗೆಸುವ ಕಾರ್ಯದಲ್ಲಿ ಕೇಂದ್ರದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಪರೀಕ್ಷಾ ಸಿಬ್ಬಂದಿಗಳು ಕೇಂದ್ರದ ಒಳಗೆ ಪ್ರವೇಶಿಸಬೇಕಾದರೆ ಕಡ್ಡಾಯವಾಗಿ ಮೂಗು ಬೊಟ್ಟನ್ನು ತೆಗೆಯೋದು, ಕಾಲುಂಗುರವನ್ನು ಬಿಚ್ಚಿ ಒಳಹೊಗುವಂತೆ ಸೂಚಿಸುತ್ತಿದ್ದ ಹಿನ್ನೆಲೆಯಲ್ಲಿ ಬಹುತೇಕ ಯುವತಿ ಯರು ಆತಂಕಕ್ಕೆ ಮತ್ತು ಮುಜುಗರಕ್ಕೆ ಒಳಗಾಗಬೇಕಾಯಿತು. ಕಳೆದ ಹಲವು ವರ್ಷಗಳಿಂದ ಧರಿಸಿದ ಮೂಗು ಬೊಟ್ಟು ತೆಗೆಯಲು ಆಗದೆ ಪರದಾಡುತ್ತಿದ್ದ ಯುವತಿಯರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಪ್ರಸಕ್ತ ನಿಯಮದಂತೆ ಪರೀಕ್ಷೆಗೆ ಹಾಜರಾಗುವ ಮಹಿಳೆಯರು ಕಡ್ಡಾಯವಾಗಿ ಮೂಗುಬೊಟ್ಟು ಕಾಲುಂಗುರ, ಕಿವಿಯೋಲೆ ತೆಗೆಯುವುದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ ಎಂದು ಪರೀಕ್ಷಾ ಕೇಂದ್ರದ ಅಧಿಕಾರಿಯ ಸಿಬ್ಬಂದಿಗಳು ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡಲು ಈ ಆಭರಣಗಳಲ್ಲಿ ಮೈಕ್ರೋಫೋನ್ ಅಳವಡಿಸುತ್ತಾರೆ ಎನ್ನುವುದು ಅವರ ಸ್ಪಷ್ಟೀಕರಣವಾಗಿದೆ.

ಅಭ್ಯರ್ಥಿ ಪರೀಕ್ಷಾ ಕೊಠಡಿ ಯೊಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕೂಡ ಕಟ್ಟಿಕೊಂಡು ಹೋಗುವಂತಿಲ್ಲ, ತುಂಬು ತೋಳಿನ ಶರ್ಟ್ ಮತ್ತು ಜೀನ್ಸ್ ಧರಿಸಿ ಹಾಜರಾಗುವಂತಿಲ್ಲ ಯಾವುದೇ ರೀತಿಯ ಆಭರಣಗಳನ್ನು ಧರಿಸಿ ಪರೀಕ್ಷೆಗೆ ಹಾಜರಾದರೆ ಅವರಿಗೆ ಅನುಮತಿ ನಿರಾಕರಿಸಲಾಗುತ್ತದೆ ಎಂದು ಅಲ್ಲಿನ ಸಿಬ್ಬಂದಿಗಳು ಮಾಹಿತಿ ನೀಡಿದರು.

ವಸ್ತç ಸಂಹಿತೆ ಪಾಲಿಸದ ಅಭ್ಯರ್ಥಿ ಗಳಿಗೆ ಪರೀಕ್ಷೆ ಬರೆಯಲು ಅನುಮತಿ ಇರುವುದಿಲ್ಲ. ಯಾವುದೇ ರೀತಿಯ ಮಾಸ್ಕ್ ಧರಿಸಿ ಕೂಡ ಕೇಂದ್ರದ ಒಳ ಆವರಣಕ್ಕೆ ಪ್ರವೇಶ ನಿರ್ಬಂಧಿಸ ಲಾಗಿತ್ತು. ಕುಶಾಲನಗರ ೨ ಕೇಂದ್ರಗಳಲ್ಲಿ ೫೦೦ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

-ಚಂದ್ರಮೋಹನ್