ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ ಕುಮಾರಿ ಪ್ರಾಸ್ತಾವಿಕ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ.

ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಜೊತೆಗೆ ಚಿಕ್ಕ ವಯಸ್ಸಿನಲ್ಲಿಯೇ ಸ್ಪರ್ಧಾ ಮನೋಭಾವವನ್ನು ಮೂಡಿಸುತ್ತವೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಯಾಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಶಾಲಾ ಎಸ್‌ಡಿಎಂಸಿ ಸದಸ್ಯರಾದ ಚಿಣ್ಣಪ್ಪ, ಉಮೇಶ್, ಮುಖ್ಯ ಶಿಕ್ಷಕರಾದ ವಾಣಿ, ಜಯಮ್ಮ ಭಾಗವಹಿಸಿದ್ದರು.

ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಜೇತ ಮಕ್ಕಳಿಗೆ ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಪದಕಗಳನ್ನು ನೀಡಲಾಯಿತು.

ನೆನಪಿನ ಕಾಣಿಕೆ ಮತ್ತು ಕಾರ್ಯಕ್ರಮಕ್ಕೆ ಬ್ಯಾನರ್‌ಅನ್ನು ಮಾನವೀಯ ಸ್ನೇಹಿತರ ಒಕ್ಕೂಟ ಕೊಡಗು, ಇದರ ಸ್ಥಾಪಕ ಅಧ್ಯಕ್ಷ ಅನಿಲ್ ರೈ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಯಶಸ್ವಿಗೆ ಕೊಡುಗೆ ನೀಡಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವ ಸಲ್ಲಿಸಲಾಯಿತು.

ಪೊನ್ನಂಪೇಟೆ ಕ್ಲಸ್ಟರ್ ಪೊನ್ನಂಪೇಟೆ: ಇತ್ತೀಚಿಗೆ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಪೊನ್ನಂಪೇಟೆಯ ಸಂತ ಅಂತೋಣಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸಿಸ್ಟರ್ ಫ್ಲೋಸ್ಸಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ಸಂತ ಅಂತೋಣಿ ಪ್ರೌಢ ಶಾಲೆಯ ಫಾದರ್ ಡೇವಿಡ್ ಸಗರಾಯಿ ರಾಜ್ ನೆರವೇರಿಸಿದರು. ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ - ಎಸ್‌ಟಿ ನೌಕರರ ಸಮಾನ್ವಯ ಸಮಿತಿ ವೀರಾಜಪೇಟೆಯ ಅಧ್ಯಕ್ಷ ಟಿ.ಎಸ್. ಮಹೇಶ್, ನಿರ್ದೇಶಕ ಎನ್. ನಿಂಗರಾಜು, ವೀರಾಜಪೇಟೆ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಡಿ. ಚಂದನ, ಶಿಕ್ಷಣ ಸಂಯೋಜಕಿ ಕೆ.ಆರ್. ವಿಶಾಲಾಕ್ಷಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್, ಶಿಕ್ಷಕರಾದ ಕೆ.ಬಿ. ಪುಷ್ಪ, ಶ್ರೀಕೃಷ್ಣ ಇನ್ನಿತರರು ಇದ್ದರು.

ನಂತರ ಸಂತ ಅಂತೋಣಿ ಪ್ರೌಢಶಾಲೆಯ ಆಡಳಿತ ಅಧಿಕಾರಿ ಡೇವಿಡ್ ಸಗರಾಯ್ ರಾಜ್ ಮಾತನಾಡಿ, ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ವೇದಿಕೆ ದೊರಕಿದ್ದು, ಎಲ್ಲಾ ಮಕ್ಕಳು ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ತೀರ್ಪುಗಾರರಾಗಿ ಮಾಯಮುಡಿ ಕುಟ್ಟ, ಗೋಣಿಕೊಪ್ಪ, ಬಾಳೆಲೆ, ತಿತಿಮತಿ, ವೀರಾಜಪೇಟೆ ಕ್ಲಸ್ಟರ್‌ನ ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಈ ಸಂದರ್ಭ ಶಿಕ್ಷಕರಾದ ರಜನಿ, ತನುಜಾ, ನಿವ್ಯ, ಕಾವೇರಮ್ಮ, ಶಿಲ್ಪ, ವೀಣಾ, ಶ್ರೀಜಾ, ಸೌಮ್ಯ ಪ್ರವೀಣ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಅನಿತಕುಮಾರಿ ಸ್ವಾಗತಿಸಿ, ರೋಸಿ ವಂದಿಸಿದರು.