ಸೋಮವಾರಪೇಟೆ, ಸೆ. ೨೮ : ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಆಯುಧ ಪೂಜೋತ್ಸವ ಸಮಾರಂಭ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾಭವನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ೪೭ ವರ್ಷಗಳಿಂದ ಮೋಟಾರ್ ಯೂನಿಯನ್ ವತಿಯಿಂದ ಪಟ್ಟಣದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಯುಧ ಪೂಜೋತ್ಸವವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಸಹ ಅ. ೧೧ರಂದು ಸಮಾರಂಭ ಆಯೋಜಿಸಲಾಗಿದೆ ಎಂದರು.
ಇAದು ಕ್ರೀಡಾಕೂಟ: ಆಯುಧ ಪೂಜೋತ್ಸವ ಪ್ರಯುಕ್ತ ತಾ. ೨೯ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಘದ ಸದಸ್ಯರುಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾಗುವ ಸದಸ್ಯರಿಗೆ ಆಯುಧ ಪೂಜೋತ್ಸವದಂದು ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅ. ೧೧ರಂದು ಬೆಳಿಗ್ಗೆ ೭ ಗಂಟೆಗೆ ಸಂಘದ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ನಂತರ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗುವುದು ಎಂದ ಅವರು, ೧೦ ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯುಧ ಪೂಜಾ ಸಮಾರಂಭದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ನೃತ್ಯ ಸ್ಪರ್ಧೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಅ.೮ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ:೯೮೪೪೪೬೧೧೩೪, ೯೭೪೦೫೦೮೧೮೧ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಲಾಗುವುದು. ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಾದ ಸುಲೈಮಾನ್, ರಾಮಚಂದ್ರ ಸೇರಿದಂತೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಲೈನ್ಮೆನ್ ಸದಾಶಿವ ಜಾದವ್, ಹಾಕಿ ತರಬೇತುದಾರ ಜನಾರ್ಧನ್ ಅವರುಗಳನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಅಲಂಕೃತ ವರ್ಕ್ಶಾಪ್, ವಾಹನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ನAತರ ಬೆಂಗಳೂರಿನ ವಿ.ಪಿ.ಆರ್. ಈವೆಂಟ್ಸ್ ತಂಡದಿAದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಕಿರುತೆರೆಯ ಸರಿಗಮಪ, ಕನ್ನಡ ಕೋಗಿಲೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ವಿವಿಧ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬಾಲಕೃಷ್ಣ ಪೂಜಾರಿ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎನ್. ರಂಗಸ್ವಾಮಿ, ಕಾರ್ಯದರ್ಶಿ ಮಣಿ ಕುಶಾಲಪ್ಪ, ಖಜಾಂಚಿ ಡ್ಯಾನಿ ಡೋಮಿನಿಕ್, ಸಹ ಕಾರ್ಯದರ್ಶಿ ಎಂ.ಎA. ಕಿರಣ್ ಅವರುಗಳು ಉಪಸ್ಥಿತರಿದ್ದರು.