ಗೋಣಿಕೊಪ್ಪಲು, ಸೆ. ೨೮: ಪಟ್ಟಣದ ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿ ಸಭೆ ನಡೆಯಿತು. ಮಾರ್ಕೆಟ್ ಆವರಣದಲ್ಲಿ ಸಭೆ ಸೇರಿದ್ದ ನವಚೇತನ ದಸರಾ ಸಮಿತಿಯ ಆಡಳಿತ ಮಂಡಳಿಯಲ್ಲಿ ಕಳೆದ ಸಾಲಿನ ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ೬ ಲಕ್ಷ ಯೋಜನೆಯಲ್ಲಿ ದಸರಾ ಉತ್ಸವವನ್ನು ಹಾಗೂ ಅನ್ನದಾನ ವನ್ನು ಯಶಸ್ವಿಯಾಗಿ ನಡೆಸಲು ಆಡಳಿತ ಮಂಡಳಿಯು ನಿರ್ಧಾರ ಕೈಗೊಂಡಿತು.

ಸಮಿತಿಯ ಉಳಿಕೆ ಹಣದಲ್ಲಿ ಗ್ರಾಮ ಪಂಚಾಯಿತಿಯ ನಿವೇಶನದಲ್ಲಿ ದಸರಾ ಸಮಿತಿಯ ನೂತನ ಕಟ್ಟಡ ನಿರ್ಮಾಣವಾಗಿದ್ದು ಈ ಕಚೇರಿಯನ್ನು ಲೋಕಾರ್ಪಣೆ ಮಾಡುವ ಬಗ್ಗೆ ಸಭೆ ಅನುಮೋದನೆ ನೀಡಿತು.

ಸಾರ್ವಜನಿಕರ ಸಹಕಾರದಿಂದ ಸರ್ವಧರ್ಮಿಯರ ಒಗ್ಗೂಡೂವಿಕೆಯಿಂದ ಪ್ರತಿ ವರ್ಷವು ಅನ್ನಸಂತರ್ಪಣೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿಯೂ ಸಾವಿರಾರು ನಾಗರಿಕರಿಗೆ ಅನ್ನದಾನ ಮಾಡಬೇಕು. ಯಾವುದೇ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಲು ಹಿರಿಯ ಸದಸ್ಯ ಎಂ.ಆರ್. ರಫೀಕ್ ಸಭೆಗೆ ತಿಳಿಸಿದರು. ಆಡಳಿತ ಮಂಡಳಿಯು ಒಪ್ಪಿಗೆ ಸೂಚಿಸಿತು. ಆಯುಧ ಪೂಜೆ ಹಾಗೂ ದಸರಾ ಉತ್ಸವದಂದು ಮಾರ್ಕೆಟ್ ಆವರಣವನ್ನು ಸಿಂಗರಿಸಿ ಸ್ವಚ್ಛತೆ ಕಾಪಾಡಲು ಸದಸ್ಯ ಕೆ.ಪಿ. ಜಲೀಲ್ ಸಲಹೆ ನೀಡಿದರು.

೩೫ನೇ ವರ್ಷದ ದಸರಾ ಸಮಿತಿಯ ಅಧ್ಯಕ್ಷರಾಗಿ ಕರ್ಣರಾಜ್ (ತಂಬಿ), ಕಾರ್ಯದರ್ಶಿಯಾಗಿ ಅಸ್ಗರ್, ಉಪಾಧ್ಯಕ್ಷರಾಗಿ ಸಚಿನ್ ತಿಮ್ಮಯ್ಯ, ಖಜಾಂಚಿ ಎಂ.ಆರ್. ರಫೀಕ್, ಸಂಚಾಲಕರಾಗಿ ಕೆ.ಪಿ. ಅಬ್ದುಲ್ ಜಲೀಲ್, ಅನ್ನದಾನ ಸಮಿತಿಯ ಅಧ್ಯಕ್ಷರಾಗಿ ಸಮೀರ್, ಉಪಾಧ್ಯಕ್ಷರಾಗಿ ಅಮಾನ್ ಗೌರವ ಅಧ್ಯಕ್ಷರಾಗಿ ಡಿ.ಹೆಚ್.ಶಂಕರ್‌ರವರನ್ನು ನೇಮಕ ಮಾಡಲಾಯಿತು.

ದಸರಾ ಸಮಿತಿಗೆ ಮಂಜೂರಾದ ಖಾಲಿ ನಿವೇಶನದಲ್ಲಿ ವಿಶೇಷ ಆಸಕ್ತಿ ವಹಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸಿರುವ ಪ್ರಸ್ತುತ ಅಧ್ಯಕ್ಷರಾಗಿರುವ ಕರ್ಣರಾಜ್ (ತಂಬಿ) ಇವರನ್ನು ಕಾರ್ಯಕ್ರಮ ದಿನದಂದು ಸನ್ಮಾನಿಸಿ ಗೌರವಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಚಾಲಕರಾದ ಜಲೀಲ್ ಸ್ವಾಗತಿಸಿ ಸದಸ್ಯರಾದ ಅಬ್ದುಲ್ ಸಮ್ಮದ್ ವಂದಿಸಿದರು.