ಮುಳ್ಳೂರು, ಸೆ. ೨೭: ಕಾಳುಮೆಣಸು ಬೆಳೆಗಾರರು ಹೆಚ್ಚಾಗಿ ಸಾವಯವ ಕ್ರಮವನ್ನು ಅನುಸರಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ದೋಣಿಗಲ್ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಮತ್ತು ವಿಜ್ಞಾನಿ ಡಾ. ಕೆ.ಎನ್. ಹರ್ಷ ಅಭಿಪ್ರಾಯಪಟ್ಟರು.
ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ದಲ್ಲಿ ಸೋಮವಾರಪೇಟೆ ಸಂಬಾರ ಮಂಡಳಿಯ ಕ್ಷೇತ್ರಾಧಿಕಾರಿಗಳ ಕಚೇರಿ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆಯ ಕುರಿತು ಬೆಳೆಗಾರರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಳುಮೆಣಸು ಬೆಳೆಯುವ ಬೆಳೆಗಾರರು ಬೇಸಾಯದ ಕ್ರಮವನ್ನು ಅನುಸರಿಸಬೇಕು. ತೋಟವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹೆಚ್ಚಾಗಿ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು. ಕಾಳುಮೆಣಸು ಬೆಳೆಗೆ ಕಾಯಿಲೆ, ಸೋಂಕು ಬಂದಾಗ ಸಂಬಾರ ಮಂಡಳಿ ಶಿಫಾರಸು ಮಾಡಿದ ಔಷಧಿಯನ್ನು ಸಿಂಪಡಣೆ ಮಾಡಬೇಕು. ಅದೇ ರೀತಿಯಲ್ಲಿ ಶಿಫಾರಸು ಮಾಡಿದ ಗೊಬ್ಬರವನ್ನು ಹಾಕುವುದರಿಂದ ಕಾಳುಮೆಣಸು ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಸಕಲೇಶಪುರ ಸಂಬಾರ ಮಂಡಳಿಯ ಉಪ ನಿರ್ದೇಶಕ ಎಂ.ವೈ. ಹೊನ್ನೂರು ಸಾಂಬಾರ ಬೆಳೆಯ ಮಾರಾಟ ಮತ್ತು ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿ ನೀಡಿ ನಮ್ಮ ದೇಶದಲ್ಲಿ ೫೨ ಬಗೆಯ ಸಂಬಾರ ಬೆಳೆಗಳಿದ್ದು, ಇವು ವಿದೇಶಗಳಿಗೆ ರಫ್ತಾಗುತ್ತವೆ. ಈ ನಿಟ್ಟಿನಲ್ಲಿ ಯುವಕರು ಸಂಬಾರ ಉತ್ಪನ್ನಗಳ ಉದ್ದಿಮೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ವಿದೇಶಗಳಿಗೆ ರಫ್ತು ಮಾಡುವುದರಿಂದ ನಮ್ಮ ದೇಶಕ್ಕೆ ಬರುವ ವಿದೇಶಿ ವಿನಿಮಯ ಹೆಚ್ಚಾಗುತ್ತದೆ. ಏಲಕ್ಕಿ ಬೆಳೆಯ ತಳಿಗಳು, ನಿರ್ವಹಣೆ, ಏಲಕ್ಕಿ ಕಾಯಿಯನ್ನು ಒಣಗಿಸುವ ಕ್ರಮದ ಕುರಿತು ಸಕಲೇಶಪುರ ಸಂಬಾರ ಮಂಡಳಿಯ ಸಂಪನ್ಮೂಲ ವ್ಯಕ್ತಿ ವಿಜಯ ಮಾಹಿತಿ ನೀಡಿದರು. ಕಾರ್ಯಾಗಾರವನ್ನು ಕಾಳು ಮೆಣಸು ಬೆಳೆಗಾರ ಮತ್ತು ರಾಷ್ಟçಮಟ್ಟದಲ್ಲಿ ಕಾಳುಮೆಣಸು ಬೆಳೆಯಲ್ಲಿ ಹೆಚ್ಚಿನ ಇಳುವರಿ ಗಳಿಸಿ ಪ್ರಶಸ್ತಿ ಪಡೆದ ಕೆ.ಎಂ. ಕಾಂತರಾಜ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಸೋಮವಾರಪೇಟೆ ಸಂಬಾರ ಮಂಡಳಿಯ ಕ್ಷೇತ್ರಾಧಿಕಾರಿ ಎನ್.ಬಿ. ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಿ.ಎಲ್. ವರ್ಷಿತ್, ಕಾಫಿ ಮತ್ತು ಕಾಳು ಮೆಣಸು ಬೆಳೆಗಾರ ಎಚ್.ವಿ. ದಿವಾಕರ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ವೇತ ವಸಂತ್, ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು. ಈ ಸಂದರ್ಭ ಕೇಂದ್ರ ಸರಕಾರದ ಯೋಜನೆ ಸ್ವಚ್ಛತೆಯೇ ಸೇವೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.