ಸೋಮವಾರಪೇಟೆ, ಸೆ. ೨೮: ಮೀನುಗಾರಿಕೆ ಇಲಾಖೆಯಿಂದ ಪರಿಶಿಷ್ಟ ಪಂಗಡದ ಮೀನುಗಾರರಿಗೆ ಬೆಂಗಳೂರು ಐ.ಸಿ.ಎ.ಆರ್. ಒಳನಾಡು ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಐಸ್ ಬಾಕ್ಸ್ ಮತ್ತು ಕ್ರೇಟ್ಗಳನ್ನು ವಿತರಿಸಲಾಯಿತು.
ಸಮೀಪದ ಕಲ್ಕಂದೂರು ಗ್ರಾಮದಲ್ಲಿರುವ ತಾಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೫ ಮಂದಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಗಿರಿಜನ ಉಪಯೋಜನೆ ಅಡಿಯಲ್ಲಿ ಜಲಾಶಯಗಳಲ್ಲಿ ಹಿಡಿಯುವ ಮೀನುಗಳು ತಾಜಾವಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಗ್ರಾಹಕರನ್ನು ತಲುಪಬೇಕು ಎಂಬ ಉದ್ದೇಶದಿಂದ ಕ್ರೇಟ್ ಮತ್ತು ಐಸ್ಬಾಕ್ಸ್ಗಳನ್ನು ವಿತರಿಸಲಾಗುತ್ತಿದೆ ಎಂದ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಕುರಿತು ಸಲಹೆಗಳನ್ನು ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಅವರು, ಮೀನುಗಾರರು ಹೊಂದಬಹುದಾದ ಕೌಶಲ್ಯಾಭಿವೃದ್ಧಿಯ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿಗಳಾದ ಡಾ. ಪ್ರೀತಾ ಪಣಿಕ್ಕರ್ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಡಾ. ರಮ್ಯ, ಜೇಷ್ನಾ, ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮತ್ತು ಸದಸ್ಯರು, ಫಲಾನುಭವಿಗಳು, ಇಲಾಖೆಯ ಹೇಮಂತ್ ಮತ್ತು ನಿರ್ವಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.