ಸುಂಟಿಕೊಪ್ಪ, ಸೆ. ೨೮: ಸರಕಾರವು ಮಹಿಳೆಯರ ರಕ್ಷಣೆಗಾಗಿ ಮತ್ತು ಸುರಕ್ಷತೆಯ ದಿಸೆಯಲ್ಲಿ ಹಲವು ಕಠಿಣ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಕಾನೂನಿನ ಮಾಹಿತಿಯನ್ನು ಪಡೆದುಕೊಂಡು ಇತರರಿಗೆ ತಿಳಿಸುವಂತೆ ಠಾಣಾಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಕಾನೂನು ಆರಿವು ಕುರಿತು ಮಾಹಿತಿ ನೀಡಿದರು. ವಾಹನಗಳನ್ನು ಚಲಾಯಿಸುವಾಗ ವಾಹನದ ಪರವನಾಗಿ ದಾಖಲಾತಿಗಳನ್ನು ವಾಹನದಲ್ಲಿರಿಸಿಕೊಂಡಿರಬೇಕು. ಸಂಚಾರಿ ನಿಯಮವನ್ನು ಪಾಲಿಸಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡಿ ಸಿಕ್ಕಿಬಿದ್ದಲ್ಲಿ ಪೋಷಕರಿಗೆ ದಂಡ ಹಾಗೂ ಜೈಲು ಶಿಕ್ಷೆಯಾಗಲಿದೆ. ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು ಎಂದು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ನಿಮ್ಮ ಸುತ್ತ ಮುತ್ತಲಿನಲ್ಲಿ ಅಂತಹ ಪ್ರಕರಣಗಳು ಕಂಡು ಬಂದ ಕೂಡಲೇ ಪೊಲೀಸರಿಗೆ ತಿಳಿಸುವುದರಿಂದ ಮುಂದಾಗುವ ಭಾರೀ ಅಪರಾಧಗಳನ್ನು ತಡೆಯಬಹುದಾಗಿದೆ ಎಂದರು.

ಸಮನ್ವಯಧಿಕಾರಿ ಮಾಲಿನಿ ಮಾತನಾಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತರಬೇತಿ ಹಾಗೂ ಮಾಹಿತಿಯನ್ನು ನೀಡಿದರು. ಕೃಷಿಯಾಧಿಕಾರಿ ರಾಕೇಶ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ವೈಯಕ್ತಿಕ ಬೆಳವಣಿಗೆಯನ್ನು ಕಂಡುಕೊಳ್ಳಬಹುದಾಗಿದೆ. ಭೂಮಿಯ ಫಲವತ್ತತೆ ಬಗ್ಗೆ ನಮಗೆ ಆರಿವು ಮುಖ್ಯ. ಅರಿತು ಕೃಷಿ ಚಟುವಟಿಕೆ ನಡೆಸುವುದರಿಂದ ಲಾಭ ಗಳಿಸಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಪುಷ್ಟಲತಾ ಹಾಗೂ ಸೇವಾ ಪ್ರತಿನಿಧಿ ಯಶೋಧ ಇದ್ದರು.