*ಗೋಣಿಕೊಪ್ಪ, ಸೆ. ೨೮: ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಸಿ ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು ಎಂದು ಪೌರ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಶ್ಲಾಘಿಸಿದರು.

ರಾಜ್ಯ ಪೌರಕಾರ್ಮಿಕರ ದಿನದ ಅಂಗವಾಗಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪೌರಕಾರ್ಮಿಕರಿಗೆ ಮಧ್ಯಾಹ್ನದ ಭೋಜನಕೂಟವನ್ನು ಏರ್ಪಡಿಸಿ ಪೌರಕಾರ್ಮಿಕರ ಸಮಾಜ ಸೇವೆಯನ್ನು ಸ್ಮರಿಸಿದರು. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕಾದರೆ ಆತನ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಹೀಗೆ ತಮ್ಮ ಸುತ್ತಲಿನ ವಾತಾವರಣವನ್ನು ಶುಚಿಯಾಗಿಡುವಲ್ಲಿ ಪೌರ ಕಾರ್ಮಿಕರು ಸದಾ ಸೇವೆಯಲ್ಲಿ ಮುನ್ನಡೆಯುತ್ತಾರೆ.

ಸಮಾಜವನ್ನು ಕಟ್ಟುವಲ್ಲಿ ಇವರ ಪಾತ್ರ ನಿರಂತರವಾದದ್ದು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಎಂ., ಸದಸ್ಯ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ೨೫ಕ್ಕೂ ಹೆಚ್ಚು ಪೌರಕಾರ್ಮಿಕರು ಈ ಸಂದರ್ಭ ಹಾಜರಿದ್ದರು.