ಕುಶಾಲನಗರ, ಸೆ. ೨೮: ಜೀವನದಲ್ಲಿ ಯಾರೂ ಕಾಣದ ದೃಶ್ಯಗಳನ್ನು ಛಾಯಾಗ್ರಾಹಕರ ಕ್ಯಾಮರಾ ಕಣ್ಣುಗಳು ಗ್ರಹಿಸುತ್ತವೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದರು. ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕ್ಯಾಮರಾ ಕಾರ್ಯಗಾರ ಮತ್ತು ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಫೋಟೋ ಗಳ ಅವಲಂಬನೆ ಸಂಖ್ಯೆ ಅಧಿಕವಾಗಿದೆ ಎಂದ ಅವರು ವೃತ್ತಿಪಚಿತ್ರವೊಂದು ವ್ಯಕ್ತಿಯ ಜೀವನವನ್ನು ಜೀವಂತವಾಗಿ ಇರುವಂತೆ ಮಾಡಲು ಸಾಧ್ಯ. ಕ್ಯಾಮರಾಗಳಿಗೆ ಎಲ್ಲದನ್ನು ಗ್ರಹಿಸುವ ಶಕ್ತಿ ಇದೆ ಎಂದು ಹೇಳಿದರು.

ಒಂದು ಚಿತ್ರ ಸಾವಿರ ಪದಗಳಿಗೆ ಸಮ ಸುದ್ದಿಯ ಬಹುತೇಕ ವಿವರಗಳು ಛಾಯಾ ಚಿತ್ರಗಳಲ್ಲಿ ಲಭ್ಯವಾಗುತ್ತವೆ. ಛಾಯಾಗ್ರಾಹಕನಿಗೆ ಸಮಯ ಪ್ರಜ್ಞೆ ಅಗತ್ಯ, ಛಾಯಾಗ್ರಾಹಕರು ಇತಿಹಾಸ ಕಾರರಂತೆ ಕೆಲಸ ನಿರ್ವಹಿಸಬೇಕಾಗಿದೆ. ರ ಛಾಯಾಗ್ರಾಹಕರಿಗೆ ಹೆಚ್ಚಿನ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇದೆ.

ಪ್ರಸಕ್ತ ದಿನಗಳಲ್ಲಿ ಛಾಯಾ ಗ್ರಾಹಕರಿಗೆ ಪೂರಕವಾದ ತಂತ್ರಜ್ಞಾನ ಬಂದಿದ್ದು, ಅದರ ಸದುಪಯೋಗ ವನ್ನು ಪಡೆಯುವಂತಾಗಬೇಕು. ವೃತ್ತಿ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಕ್ಯಾಮರಾ ವೃತ್ತಿ ಜೀವನ ಹೊಂದಿದವರು ಒಗ್ಗಟ್ಟು ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿ ವೃತ್ತಿ ಬದುಕಿಗೆ ಭದ್ರತೆಯ ಅಗತ್ಯವಿದೆ ಮೊಬೈಲ್ ಪೈಪೋಟಿ ನಡುವೆ ಛಾಯಾಗ್ರಹಕರ ಸಂಖ್ಯೆ ಇಳಿಕೆಯಾಗುವ ಆತಂಕ ಕೂಡ ಕಂಡುಬರುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ಸಭಾಂಗಣದಲ್ಲಿ ಗುಡ್ಡೆಮನೆ ವಿಶ್ವಕುಮಾರ್ ಅವರಿಂದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಆರ್ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಯ ವರ್ಧನ್, ಮಾಜಿ ಅಧ್ಯಕ್ಷರುಗಳಾದ ಮೂಕಳೇರ ಲಕ್ಷö್ಮಣ್, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ, ಕುಶಾಲನಗರ, ವೀರಾಜಪೇಟೆ ವ್ಯಾಪ್ತಿಯ ಅಧ್ಯಕ್ಷರುಗಳು ಮತ್ತು ಸಂಘದ ನಿರ್ದೇಶಕರುಗಳು, ಜಿಲ್ಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.

ಅಪೂರ್ವ ಪ್ರಾರ್ಥನೆ, ಡೇವಿಡ್ ಸೋಲೋಮನ್ ಸ್ವಾಗತಿಸಿದರು. ಶಿಕ್ಷಕರಾದ ಊರ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಛಾಯಾಚಿತ್ರಗ್ರಾಹಕ ಕುಟುಂಬ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.