ವೀರಾಜಪೇಟೆ, ಸೆ. ೨೮: ಪಟ್ಟಣದಲ್ಲಿ ನೆಲೆಸಿದ್ದ ಅಸ್ಸಾಂ ಮೂಲದ ಯುವಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಅಸ್ಸಾಂ ರಾಜ್ಯ ದಗಲ್ಪುರಿ ಮಡ್ಗಾಂ ಮೂಲದ, ಪ್ರಸ್ತುತÀ ಪಟ್ಟಣದ ಮೊಗರಗಲ್ಲಿಯಲ್ಲಿ ವಾಸವಿದ್ದ ಅಜರುಲ್ ಇಸ್ಲಾಂ (೧೯) ಮೃತ ದುರ್ದೈವಿ.
ಅಜರುಲ್ ಇಸ್ಲಾಂ ಪಟ್ಟಣದ ಕೋಳಿ ಮಾಂಸ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮೊಗರಗಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಸ್ಸಾಂನಲ್ಲಿರುವ ತನ್ನ ಪ್ರೇಯಸಿಯೊಂದಿಗೆ ಗಲಾಟೆ ಏರ್ಪಟ್ಟಿದ್ದು, ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ತಾ. ೨೭ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಯುವಕ ವಿಷ ಸೇವಿಸಿದ್ದು, ಸಹಕಾರ್ಮಿಕರು ಕರೆ ಮಾಡಿದ ಸಂದರ್ಭ ಅಜರುಲ್ ಕರೆ ಸ್ವೀಕರಿಸದ ಹಿನ್ನೆಲೆ ಅನುಮಾನಗೊಂಡು ತೆರಳಿ ನೋಡಿದಾಗ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೇರಳದಲ್ಲಿ ಉದ್ಯೋಗದಲ್ಲಿದ್ದ ಮೃತನ ಅಣ್ಣ ಕೈರುಲ್ಲಾ ಇಸ್ಲಾಂ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ