ಪೊನ್ನಂಪೇಟೆ, ಸೆ. ೨೭: ಕಾರು ಆಕಸ್ಮಿಕವಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತಪಟ್ಟ ಘಟನೆ ಆನೆ ಚೌಕೂರು- ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ.
ಪೊನ್ನಂಪೇಟೆ ಸಮೀಪದ ಜೋಡುಬೀಟಿ ಗ್ರಾಮದ ನಿವಾಸಿ ಬಿಲ್ಲೆರಿಕುಟ್ಟಂಡ ಪ್ರಭು ಎಂಬವರ ಪತ್ನಿ ಮಂಜುಳ ಪ್ರಭು ಮೃತ ದುರ್ದೈವಿ. ತಾ. ೨೭ ರಂದು ಕಾರ್ಯನಿಮಿತ್ತ ತಮ್ಮ ಪತಿಯೊಡನೆ ವ್ಯಾಗನರ್ ಕಾರಿನಲ್ಲಿ ಪಿರಿಯಾಪಟ್ಟಣಕ್ಕೆ ತೆರಳಿ ವಾಪಸು ಬರುತ್ತಿದ್ದಾಗ ಪಿರಿಯಾಪಟ್ಟಣ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮುಂಭಾಗದಲ್ಲಿ ಕುಳಿತಿದ್ದ ಮಂಜುಳ ಅವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತಿದ್ದ ಪ್ರಭು ಹಾಗೂ ಹಿಂಬದಿ ಸೀಟಿನಲ್ಲಿದ್ದ ಮತ್ತೊಬ್ಬ ಮಹಿಳೆಗೂ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮಹಿಳೆ ಪತಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತ ಮಹಿಳೆ ಮಂಜುಳ ಪ್ರಭು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಸದಸ್ಯೆಯಾಗಿದ್ದರು.