(ಕಳೆದ ಸಂಚಿಕೆಯಿAದ)
ಈ ಮಧ್ಯೆ ೩೦ ವರ್ಷಗಳಿಂದ ಇದ್ದ ದಾಖಲೆಯನ್ನು ಸ್ಥಗಿತಗೊಳಿಸಿ ಬೆಳೆ ಕಲಂನಲ್ಲಿ ಖಾಲಿ ದಾಖಲಿಸಿ ಕಂದಾಯ ಕಟ್ಟದಿರುವ ಜಾಗವೆಂಬ ಆರ್.ಟಿ.ಸಿ. ದಾಖಲಿಸಲಾಗಿದೆ. ಇದರಿಂದಾಗಿ ಅನೇಕ ವರ್ಷಗಳಿಂದ ಸಹಕಾರ ಸಂಘದಿAದ ದೊರಕುತ್ತಿದ್ದ ಸಾಲ ಸೌಲಭ್ಯ ಸ್ಥಗಿತಗೊಂಡಿದೆ. ಜೀವನದಲ್ಲಿ ಇಂತಹ ಘಟನೆಗಳಿಂದ ಜಿಗುಪ್ಸೆಗೊಂಡು ರೈತನ ಆತ್ಮಹತ್ಯೆ ಆದರೆ ಆಶ್ಚರ್ಯವಿಲ್ಲ. ಇದು ಸರಿಯಾದ ಕಾರಣ. ಇದಕ್ಕೆ ಯಾರು ಹೊಣೆ? ಕಟ್ಟಬೇಕಾದ ಕಂದಾಯದ ಮೊತ್ತ ರೂ. ೨೦೦೦/-. ಈಗಾಗಲೇ ಹಳೆಯ ದಾಖಲೆಗಳಲ್ಲಿ ಪಾವತಿಸಿದ್ದು ರೂ. ೫೦೦/-. ಇದಕ್ಕಾಗಿ ಓಡಾಟಕ್ಕೆ ತಗುಲಿದ ವೆಚ್ಚ ರೂ. ೧೫೦೦೦/-.
ಹೇಗಿದೆ ವ್ಯವಸ್ಥೆ?
ಕೊಡಗಿನಲ್ಲಿ ವನ್ಯಪ್ರಾಣಿಗಳ ಹಾವಳಿ ಬಗ್ಗೆ ಬರೆದಷ್ಟು ಮುಗಿಯುವುದಿಲ್ಲ. ಆನೆಗಳ ಹಾವಳಿಗೆ ಖಾಯಂ ಪರಿಹಾರ ಒದಗಿಸುವಲ್ಲಿ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದೆ. ಆನೆಗಳ ಹಾವಳಿ ಹೀಗೇ ಮುಂದುವರಿದರೆ ಅನೇಕ ರೈತರ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಕಾಫಿ ತೋಟಗಳಿಂದ ಆನೆಗಳನ್ನು ಓಡಿಸುವ ಕಾರ್ಯಕ್ರಮ ಈಗ ಮಾಮೂಲು ಆಗಿಬಿಟ್ಟಿದೆ. ಈ ತೋಟದಿಂದ ಆ ತೋಟಕ್ಕೆ, ಆ ತೋಟದಿಂದ ಈ ತೋಟಕ್ಕೆ - ಗದ್ದೆಗಳಲ್ಲಿ ಆನೆಗಳು ಮಾಡುತ್ತಿರುವ ಅನಾಹುತ ಕಣ್ಣೀರು ತರುತ್ತದೆ. ಆದರೆ ಕಷ್ಟಪಟ್ಟ ರೈತರಿಗಲ್ಲದೇ ಬೇರೆಯವರಿಗೆ ಈ ಕಷ್ಟ ಹೇಗೆ ಅರ್ಥವಾಗಬೇಕು? ಅರಣ್ಯಾಧಿಕಾರಿಗಳು ಆನೆಗಳ ಹೆಸರಿನಲ್ಲಿ ಹಣ ಗಳಿಸುವಿಕೆಯ ಮಾರ್ಗ ಕಂಡುಕೊAಡಿದ್ದರೂ ಆಶ್ಚರ್ಯವಿಲ್ಲ.
ಆನೆಗಳನ್ನು ನಾಡಿನಿಂದ ಕಾಡಿಗೆ - ಕಾಡಿನಿಂದ ನಾಡಿಗೆ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡುವ ಸರಕಾರ ರೈತರ ಬೆಳೆ ನಷ್ಟ ಪರಿಹಾರದ ಬಗ್ಗೆ ತೀವ್ರ ನಿರ್ಲಕ್ಷö್ಯ ತೋರುತ್ತಿದೆ. ರೈತರ ದುಡಿತದ ಬೆವರಿಗೆ ಆನೆಗಳ ಓಡಾಟದ ಕಾರ್ಯಕ್ರಮಕ್ಕೆ ಖರ್ಚು ಮಾಡುವ ಹಣದ ಒಂದು ಭಾಗವೂ ದೊರಕದೇ ಇರುವುದು ಎಂತಹ ವಿಪರ್ಯಾಸ ಅಲ್ವಾ?
ಮಂಗಗಳು, ನವಿಲುಗಳ ಹಾವಳಿಯಿಂದಾಗಿ ತೋಟಗಳಲ್ಲಿ ಯಾವುದೇ ಹಣ್ಣುಗಳೂ ರೈತರಿಗೆ ಸಿಗಲಾರದ ಸ್ಥಿತಿಯಿದೆ, ಮಂಗಗಳು, ನವಿಲುಗಳ ಕಾಟದಿಂದಾಗಿ ಉಂಟಾಗುವ ಫಸಲು ನಷ್ಟ ರೈತರಿಗೆ ತಾನೇ? ರಾಜಕಾರಣಿಗಳಿಗೆ ಅದರ ಚಿಂತೆ ಏಕೆ?
ರೈತರ ಬಗ್ಗೆ ಅನೇಕ ಘೋಷಣೆಗಳು ಬಹಳ ಹಾಸ್ಯಾಸ್ಪದವಾಗಿವೆ. ಅವುಗಳ ಒಂದು ಸ್ಯಾಂಪಲ್ ಹೀಗಿವೆ:-
೧. ಸರಕಾರದ ನಡೆ ರೈತರ ಕಡೆ, ೨. ನಿಮ್ಮೊಂದಿಗೆ ನಾವಿದ್ದೇವೆ ಚಿಂತಿಸಬೇಡಿ, ೩. ರೈತರು ದೇಶದ ಬೆನ್ನೆಲುಬು, ೪. ಕಾಡು ಬೆಳೆಸಿ ನಾಡು ಉಳಿಸಿ, ಜಲ ಸಂರಕ್ಷಿಸಿ ಕೇಳಲು ಎಷ್ಟು ಇಂಪು, ನೋಡಲು ಎಷ್ಟು ಚೆಂದ. ಹಸಿ ಸುಳ್ಳಿನ ಘೋಷಣೆಗಳು-ಎಂತಹ ವಿಪರ್ಯಾಸ!!
ಕಾಡು ಬೆಳೆಸಿ-ನಾಡು ಉಳಿಸಿ-ಜಲಸಂರಕ್ಷಣೆ ಮಾಡಿರಿ. ಇದು ರಾಜ್ಯ ಸರಕಾರದ ಅರಣ್ಯ ಇಲಾಖೆಯ ಅಲ್ಲಲ್ಲಿ ತೂಗಿ ಹಾಕಿರುವ ಫಲಕಗಳು!
ದಿನಂಪ್ರತಿ ಕೊಡಗು ಜಿಲ್ಲೆಯಿಂದ ಕಳ್ಳ ಸಾಗಾಣಿಕೆ ಆಗುತ್ತಿರುವ ಹಾಗೂ ಅನ್ಯ ರಾಜ್ಯಗಳಿಂದ ಬಂದ ಮರ ವ್ಯಾಪಾರಿಗಳಿಗೆ ಮರ ಕಡಿದು ಸಾಗಿಸಲು ಕಣ್ಣುಮುಚ್ಚಿ ಅನುಮತಿ ಪತ್ರ ಕೊಡುವಾಗ ಈ ಘೋಷಣೆಗಳು ನೆನಪಿಗೆ ಬರುವುದಿಲ್ಲವೇ?
ಈ ರೀತಿಯ ಧೋರಣೆಗಳಿಂದ ಒಂದಲ್ಲ ಒಂದು ದಿನ ಕೊಡಗು ಮರ ಕಾಡುಗಳಿಲ್ಲದೇ ಬರಡಾಗುವ ಸಮಯ ಬಹಳ ದೂರವಿಲ್ಲ.
ಇದು ಜಿಲ್ಲೆಯ ಅನೇಕ ಮೂಲನಿವಾಸಿ ರೈತರ ಅಭಿಪ್ರಾಯ - ಯೋಚಿಸಿದರೆ ತುಂಬಾ ಆಘಾತವಾಗುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಅವ್ಯಾಹತವಾಗಿ ಮರ ಹನನಗಳಾಗುತ್ತಿವೆ. ಸರಕಾರದ ಜಮೀನು, ಖಾಸಗಿ ಜಮೀನು ಎಲ್ಲಾ ಕಡೆ ಹಣದ ದಂಧೆಗೆ ಬೇಕಾಗಿ ಕೊಡಗಿನ ಭೂಮಿಯ ಬರಡು ಮಾಡುವ ಈ ಕಾರ್ಯಕ್ರಮ ನಿರಂತರ ನಡೆಯುತ್ತಿದೆ.
ಕೊಡಗಿನಲ್ಲಿ ಸರಕಾರಿ ಕಚೇರಿಗಳಲ್ಲಿ ತೂಗು ಹಾಕಿರುವ ಲೋಕಾಯುಕ್ತ ಕಚೇರಿಯಿಂದ ನೋಟೀಸ್ ಫಲಕ ಜನತೆಯನ್ನು ಅಣಕಿಸುವಂತಿದೆ. ಈ ನೋಟೀಸ್ ಬೋರ್ಡ್ಗಳ ಅಡಿಯಲ್ಲೇ ಹಣದ ದಂಧೆ ನಡೆಯುತ್ತಿರುತ್ತದೆ. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಏನೇನೂ ತಲೆ ಕೆಡಿಸುವಂತಿಲ್ಲ.
ಏಕೆAದರೆ ಅದೂ ಸಹ ಒಂದು ಸರಕಾರಿ ಸಂಸ್ಥೆ ಇತ್ತೀಚೆಗೆ ಮಡಿಕೇರಿಯ ಓರ್ವ ಹಿರಿಯ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಆಗಮನದ ಸುದ್ದಿ ತಿಳಿದು ಪರಾರಿಯಾಗಿ ಪುನಃ (ನ್ಯಾಯಾಲಯದ ಆದೇಶ ಪಡೆದು) ಅದೇ ಸ್ಥಾನದಲ್ಲಿ ಕುಳಿತಿರಬೇಕಾದರೆ ಜನಸಾಮಾನ್ಯರಿಗೆ ಲೋಕಾಯುಕ್ತ ಕಚೇರಿಯ ಕಾರ್ಯ ನಿರ್ವಹಣೆ ಬಗ್ಗೆ ಅನುಮಾನ ಬರುವುದು ಸಹಜ.
ಈ ಕಚೇರಿಗಳಲ್ಲಿ ಬಹಳಷ್ಟು ಬಡ ರೈತ ವರ್ಗದವರೇ ತಮ್ಮ ಕೆಲಸ ಕಾರ್ಯಗಳ ನಿರ್ವಹಣೆಗೆ ಬರುತ್ತಿರುತ್ತಾರೆ. ಅವರ ಸ್ಥಿತಿ ಹೇಗಾಗಬೇಡ. ಎಲ್ಲಾ ಕುರುಡು ಕಾಂಚಾಣದ ಒಂದೊAದು ಅವತಾರಗಳು ತಾನೇ?
ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಕಚೇರಿಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆದು ತಕ್ಕ ಕಾನೂನು ಕ್ರಮಗಳನ್ನು ಕೈಗೊಂಡರೆ ರೈತ ಸಮುದಾಯದವರಿಗೆ ಸ್ವಲ್ಪವಾದರೂ ನ್ಯಾಯ ದೊರಕಬಹುದು. ಇಲ್ಲದಿದ್ದರೆ ಹಳೆ ಚಾಳಿ ಮುಂದುವರಿದು ಜಿಲ್ಲೆಯ ಅನೇಕ ಬಡ ರೈತರ ಜೀವನ ನರಕಮಯ ರೂಪ ತಾಳುವುದರಲ್ಲಿ ಯಾವುದೇ ಸಂಶಯವಿಲ್ಲ.
ರೈತರ ಬವಣೆಗಳ ಮುಂದುವರಿದ ಭಾಗ ಕೊಡಗು ಜಿಲ್ಲೆಯ ಪಶುವೈದ್ಯ ಆಸ್ಪತ್ರೆಗಳು. ಜಿಲ್ಲೆಯ ಅನೇಕ ರೈತರು ಈಗಲೂ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಇದರೊಂದಿಗೆ ಕೋಳಿ, ಆಡು, ಕುರಿ, ಹಂದಿಗಳ ಸಾಕಾಣಿಕೆ ಮುಂದುವರಿದಿದೆ. ಆದರೆ ಎಂತಹ ದುರದೃಷ್ಟಕರ ಸಂಗತಿ ಎಂದರೆ ನಮ್ಮ ಜಿಲ್ಲೆಯಲ್ಲಿ ಅನೇಕ ಪಶುವೈದ್ಯ ಶಾಲೆಗಳಲ್ಲಿ ವೈದ್ಯರ ಕೊರತೆ ಇದೆ. ೧೦-೧೨ ಪಶುವೈದ್ಯ ಆಸ್ಪತ್ರೆಗಳಿಗೆ ಓರ್ವನೇ ಪಶುವೈದ್ಯ!
ಹೊರ ರಾಜ್ಯಗಳಿಂದ ಬಂದ ಅನೇಕರು ಕೊಡಗು ಜಿಲ್ಲೆಯ ಹಸಿರು ಬೆಟ್ಟಗುಡ್ಡಗಳನ್ನು ಆಕ್ರಮಿಸಿ ಅಲ್ಲಿ ಮನೆಗಳು, ಹೋಂಸ್ಟೇ, ರೆಸಾರ್ಟ್ಗಳನ್ನು ನಿರ್ಮಾಣ ಮಾಡುತ್ತಾರೆ. ಪ್ರಾಕೃತಿಕ ವಿಕೋಪದ ಸಂದರ್ಭ ಅವರಿಗೆ ಆದ ನಷ್ಟ ಪರಿಹಾರ ಸರಕಾರ ಭರಿಸುತ್ತದೆ. ಇವರಿಗೆ ಹೇಗೆ ಕಾನೂನು ಕಟ್ಟಳೆ ಉಲ್ಲಂಘಿಸಿ ಗುಡ್ಡಗಳನ್ನು ಬಗೆದು ಕಟ್ಟಡಗಳನ್ನು ಕಟ್ಟಲು ಅವಕಾಶ ಸಿಕ್ಕಿತು?
ಹೊಳೆ ಬದಿಗಳನ್ನು ಅತಿಕ್ರಮಿಸಿ ವಾಸದ ಮನೆಗಳ ನಿರ್ಮಾಣ, ಅವುಗಳಿಗೆ ಕುಡಿಯುವ ನೀರು, ವಿದ್ಯುಚ್ಛಕ್ತಿ ಹೇಗೆ ಸರಬರಾಜಾಗುತ್ತವೆ. ಇವುಗಳಿಗೆ ಅನುಮತಿ ಕೊಡುವುದು ಹೇಗೆ?
ಅತಿಕ್ರಮಣ ಸ್ಥಳಗಳಲ್ಲಿ ವಾಸಕ್ಕೆ ಅನುಮತಿ ಕೊಟ್ಟು ಅಕ್ರಮಗಳನ್ನು ಸಕ್ರಮ ಮಾಡಿ ಕೊಡಗಿನ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿಪಡಿಸುವುದೆ ಸರಕಾರದ ಉದ್ದೇಶವೇ?
ಹೊರ ರಾಜ್ಯದ ಕಪ್ಪು ಹಣ ತುಂಬಿರುವ ಕುಳಗಳು ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅನೇಕ ಸ್ಥಳಗಳನ್ನು ಪಡೆದು ಹೋಂಸ್ಟೇ, ರೆಸಾರ್ಟ್ಗಳ ನಿರ್ಮಾಣ ಅಲ್ಲದೇ ಸಾವಿರಾರು ಎಕರೆ ಕಾಫಿ ತೋಟ, ಗದ್ದೆಯ ಬಹುಪಯೋಗಿ ಜಾಗಗಳನ್ನು ಜನವಸತಿ ಲೇಔಟ್ಗಳಾಗಿ ಪರಿವರ್ತಿಸಿ ಕೊಡಗಿನ ಜನರ ನೆಮ್ಮದಿಯನ್ನು ಸಂಪೂರ್ಣ ಹಾಳುಮಾಡಲು ಆರಂಭಿಸಿದ್ದಾರೆ. ಇವರಿಗೆ ಈ ರೀತಿ ಅಕ್ರಮವಾಗಿ ಕೊಡಗಿನಲ್ಲಿ ನೆಲೆಯೂರಲು ಜಿಲ್ಲಾಡಳಿತ ಹೇಗೆ ಅನುಮತಿ ಕೊಡುತ್ತಿದೆ ಎಂಬುದೇ ಬಿಡಿಸಲಾಗದ ಕಗ್ಗಂಟಾಗಿದೆ.
ಕೊಡಗಿನಲ್ಲಿ ಅನಾದಿ ಕಾಲದಿಂದ ವಾಸವಿರುವ ಎಲ್ಲಾ ಜನಾಂಗದವರ ಬದುಕು ಮೂರಾಬಟ್ಟೆ ಆಗಲು ಬಿಡಬಾರದು. ಇಲ್ಲಿರುವ ಪಾರಂಪರಿಕ ಭೂಮಿಗಳು, ಜಾನಪದ ಗುರುತು, ರಾಜರ ಕಾಲದ ಕಟ್ಟಡಗಳು, ದೇವಸ್ಥಾನಗಳು, ಕಾವೇರಿ ಉಗಮಸ್ಥಳ, ದೇವರಕಾಡು, ಮುಂತಾದ ಅನೇಕ ಪಾರಂಪರಿಕ ಸ್ಥಳಗಳ ರಕ್ಷಣೆಯಾಗಬೇಕಾಗಿದೆ.
ಕೊಡಗು ಜಿಲ್ಲೆ ಹಿಂದಿನAತೆ ಉಳಿದರೆ ಮಾತ್ರ ಸರ್ವರಿಗೂ ನೆಮ್ಮದಿ ಜೀವನ. ಇಲ್ಲವಾದರೆ ಅನ್ಯರ ಅತಿಕ್ರಮಣದಿಂದ ಜಿಲ್ಲೆಯ ಜನರಿಗೆ ನಿರಂತರ ಸಂಕಷ್ಟ ಕಟ್ಟಿಟ್ಟ ಬುತ್ತಿ, ಸ್ಥಳೀಯರ ಜೀವನವೇ ತಲೆನೋವಾಗಬಹುದು.
ಈ ನಿಟ್ಟಿನಲ್ಲಿ ಪರರಾಜ್ಯಗಳಿಂದ ಬರುವ ಹಣವಂತ ಧನಿಕರನ್ನು, ಕಾರ್ಮಿಕರನ್ನು ಕಟ್ಟೆಚ್ಚರದಿಂದ ಇರುವಂತೆ ಜನತೆಗೆ ಕರೆ ಕೊಡಬೇಕಾಗಿದೆ.
ಸರಕಾರಿ ಕಚೇರಿಗಳಲ್ಲಿ ದುಡಿಯುವ ಜನಪರ ಕಾಳಜಿ ಹೊಂದಿದ, (ಕೆಲವೇ ಕೆಲವು?) ನಿಷ್ಠಾವಂತ ಅಧಿಕಾರಿ ವರ್ಗ ಹಾಗೂ ನೌಕರ ವರ್ಗದವರ ಸೇವೆ ರೈತರ ಪಾಲಿಗೆ ಸದಾ ಮುಂದುವರೆಯಲಿ, ಕೆಲಸ ಮಾಡದವರಿಗೆ ಜನಪ್ರತಿನಿಧಿಗಳು ಬಿಸಿ ಮುಟ್ಟಿಸಲಿ ಎಂಬ ಆಶಯವಷ್ಟೆ.
(ಮುಗಿಯಿತು)
- ಹೆಚ್.ಎಸ್. ತಿಮ್ಮಪ್ಪಯ್ಯ, ಚೆಟ್ಟಳ್ಳಿ, ಮೊ. ೮೯೭೧೮ ೦೯೫೦೧