ಮಡಿಕೇರಿ, ಸೆ. ೨೬: ಕೊಡಗಿನಲ್ಲಿ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ಹಾಗೂ ವರದಿಯನ್ನು ಮಂಡಿಸಿದರು.

ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ, ಸಹಕಾರಿ ಸಂಘವು ರೂ. ೧೯೪.೮೨ ಕೋಟಿ ಠೇವಣಿ ಹೊಂದಿದ್ದು, ರೂ. ೧೮೫.೪೨ ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿದೆ. ದುಡಿಯುವ ಬಂಡವಾಳ ರೂ. ೨೧೦.೨೦ ಕೋಟಿ ಇದ್ದು ಒಟ್ಟು ರೂ. ೧,೦೬೦ ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ. ಸಂಘದಲ್ಲಿ ಒಟ್ಟು ರೂ. ೩,೧೧,೭೪,೨೩೦.೪೬ ಕ್ಷೇಮನಿಧಿ ಹಾಗೂ ರೂ. ೬,೮೧,೨೩,೭೪೩.೩೬ ಇತರ ನಿಧಿ ಇದೆ. ಪ್ರಸ್ತುತ ಸಂಘದಲ್ಲಿ ರೂ. ೪,೦೫,೬೩,೫೭೧.೩೭ ಮೌಲ್ಯದ ಚರಾಸ್ತಿ ಹಾಗೂ ರೂ. ೨,೧೮,೦೮,೪೬೯.೩೨ ಸ್ಥಿರಾಸ್ತಿ ಇದೆ. ಈ ವರ್ಷದಲ್ಲಿ ಸಂಘವು ರೂ. ೨,೦೧,೩೫,೪೧೫.೬೫ ನಿವ್ವಳ ಲಾಭ ಗಳಿಸಿದ್ದು ಸದಸ್ಯರುಗಳಿಗೆ ಶೇ. ೧೫ ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು.

ಸದಸ್ಯರಾದ ಸೋಮಶೇಖರ ಕೊಯಿಂಗಾಜೆ ಅವರು ಮಾತನಾಡಿ, ಸಂಘದ ಲಾಭಾಂಶ ಕಳೆದ ಬಾರಿ ಈ ಬಾರಿಗಿಂತ ಕಡಿಮೆ ಇತ್ತು. ಆದರೂ ಕಳೆದ ಬಾರಿ ಶೇ. ೨೦ ಡಿವಿಡೆಂಡ್ ನೀಡಿದ್ದರು. ಈ ಬಾರಿ ಲಾಭಾಂಶ ಕಳೆದ ಬಾರಿಗಿಂತ ಹೆಚ್ಚು ಇದೆ. ಆದರೆ ಡಿವಿಡೆಂಡ್ ಮಾತ್ರ ಶೇ. ೧೫ಕ್ಕೆ ಬಂದಿದೆ ಅದನ್ನು ಹೆಚ್ಚು ಮಾಡುವಂತೆ ಸಲಹೆ ನೀಡಿದರು. ಆಗ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ, ಕಟ್ಟಡದ ಭದ್ರತೆಗಾಗಿ ರಿಸರ್ವ್ ಫಂಡ್ ಇಡುವ ಉದ್ದೇಶದಿಂದ ಈ ಬಾರಿ ಡಿವಿಡೆಂಡ್ ೧೫ ಪರ್ಸೆಂಟ್‌ಗೆ ಇಳಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೫ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ವಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಹೇಮಚಂದ್ರ ಐ.ಕೆ., ನವೀನ್ ಕುಮಾರ್ ಜೆ.ವಿ., ಶೈಲೇಶ್ ಅಂಬೆಕಲ್ಲು, ಜಯಲಲಿತಾ ಕೆ.ಎಸ್., ಲತಾ ಎಸ್. ಮಾವಾಜಿ, ನಳಿನಿ ಸೂರಯ್ಯ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ., ಸಹಾಯಕ ಪ್ರಧಾನ ವ್ಯವಸ್ಥಾಪಕ ಮನೋಜ್ ಕುಮಾರ್ ಪಿ. ಉಪಸ್ಥಿತರಿದ್ದರು.