ಭಾಗಮಂಡಲ, ಸೆ. ೨೬: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ನಡೆಯಿತು.

ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು ತಮ್ಮ ಐನ್‌ಮನೆಯಲ್ಲಿ ಸೇರಿ ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಂದು ಬೆಳಿಗ್ಗೆ ೮.೩೫ಕ್ಕೆ ತುಲಾ ಲಗ್ನದಲ್ಲಿ ಭಗಂಡೇಶ್ವರ ದೇವಾಲಯ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಹಾಕಿದರು. ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ ಅವರ ಮನೆಯಿಂದ ಅಕ್ಕಿಯನ್ನು ವಾದ್ಯ ಸಹಿತವಾಗಿ ತಂದು ಭಾಗಮಂಡಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪತ್ತಾಯಕ್ಕೆ ಹಾಕಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಲಕಾವೇರಿ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಪ್ರಧಾನ ಅರ್ಚಕರಾದ ಹರೀಶ್ ಭಟ್ ಮತ್ತು ಅರ್ಚಕ ವೃಂದದವರು, ಕೆ.ಜೆ. ಭರತ್ ಕುಮಾರ್, ಬಿ.ಎಸ್ ತಮ್ಮಯ್ಯ ಇದ್ದರು. -ಸುನಿಲ್ ಕುಯ್ಯಮಡಿ