ಮಡಿಕೇರಿ, ಸೆ. ೨೬: ಮಡಿಕೇರಿ ದಸರಾ ಜನೋತ್ಸವ ಹಿನ್ನಲೆ ಮತ್ತು ನಾಡಹಬ್ಬದ ಮಹತ್ವ ತಿಳಿಸುವ ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕವು ಸೆ.೨೯ ರಂದು ಭಾನುವಾರ ಮಡಿಕೇರಿಯಲ್ಲಿ ಲೋಕಾರ್ಪಣೆಯಾಗಲಿದೆ.
ದಸರಾ ಜನೋತ್ಸವದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಪತ್ರಕರ್ತ ಅನಿಲ್ ಎಚ್.ಟಿ ಪ್ರಕಟಿಸಿರುವ ೧೩೨ ವರ್ಣಪುಟಗಳ ಸಂಗ್ರಹಯೋಗ್ಯ ಕೃತಿಯನ್ನು ತಾ.೨೯ ರಂದು ಸಂಜೆ ೪ ಗಂಟೆಗೆ ಮಡಿಕೇರಿಯ ರೆಡ್ಬ್ರಿಕ್ಸ್ ಇನ್ನ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ಶಾಸಕ ಡಾ.ಮಂತÀರ್ ಗೌಡ ಲೋಕಾರ್ಪಣೆ ಮಾಡಲಿದ್ದಾರೆ.
ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ, ಭೀಮ್ ಸಿಂಗ್ ಅವರ ಪುತ್ರಿ ಶಾರದಾಭಾಯಿ ಮತ್ತು ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸನ್ಮಾನಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ, ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಜೇಶ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಲೇಖಕ ಅನಿಲ್ ಮಾಹಿತಿ ನೀಡಿದ್ದಾರೆ.