ಕೂಡಿಗೆ, ಸೆ. ೨೬: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಕ್ರೀಡಾ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವು ನಡೆಯಿತು.

ಕ್ರೀಡಾಕೂಟದ ಉದ್ಘಾಟನೆ ಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿ ನಂತರ ಮಾತನಾಡಿ, ಕ್ರೀಡಾಕೂಟ ಸಾಮರಸ್ಯ, ಬಾಂಧವ್ಯದ ಸಂಕೇತ. ಹಬ್ಬ, ಹರಿದಿನಗಳಂತೆ ಕ್ರೀಡಾಕೂಟಗಳು ಕೂಡ ಸಂಭ್ರಮ ಮೂಡಿಸುತ್ತಿವೆ. ಯುವಕರು, ವಿದ್ಯಾರ್ಥಿಗಳು, ಕ್ರೀಡಾಸ್ಪೂರ್ತಿಯೊಂದಿಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ದಸರಾ ಕ್ರೀಡಾಕೂಟದ ಮುಖೇನ ಒಗ್ಗೂಡುವಿಕೆ, ಯುವ ಜನಾಂಗ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಹಕಾರವಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ದಸರಾ ಕ್ರೀಡಾಕೂಟದ ಉದ್ದೇಶ ಹಾಗೂ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು. ಗ್ರಾಮಾಂತರ ಪ್ರದೇಶದ ಯುವಕ ಯುವತಿಯರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಕ್ರೀಡಾಕೂಟಗಳು ಪೂರಕವಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ರೀಡಾ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆಯುತ್ತದೆ. ಇದು ವ್ಯಕ್ತಿತ್ವಕ್ಕೆ ಪೂರಕ ಎಂದು ತಿಳಿಸಿದರು.

ಈ ಸಂದರ್ಭ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವ್ ಕುಮಾರ್, ಹಾಕಿ ತರಬೇತಿದಾರರಾದ ವೆಂಕಟೇಶ, ದೀನಾಮಣಿ, ಬಿಂದು, ಮಂಜುನಾಥ, ಸುರೇಶ್, ಕುಶಾಲನಗರ ಪ್ರೆಸ್‌ಕ್ಲಬ್ ಅಧ್ಯಕ್ಷ ರಘು ಸೇರಿದಂತೆ ಇನ್ನಿತರರು ಇದ್ದರು.