ಸೋಮವಾರಪೇಟೆ, ಸೆ. ೨೬: ತಾಲೂಕಿನ ಯಡವನಾಡು ಗ್ರಾಮದ ಕೃಷಿಕ ಹಾಗೂ ಯುವ ಲೇಖಕ ಹೇಮಂತ್ ಪಾರೇರಾ ಅವರ ‘ಒಲವಿನ ಸವಾರಿ’ ಕಥಾ ಸಂಕಲನ ಪಟ್ಟಣದ ಪತ್ರಿಕಾಭವನದಲ್ಲಿ ಲೋಕಾರ್ಪಣೆಯಾಯಿತು.
ಒಲವಿನ ಸವಾರಿ, ಕಾಡಿನ ಕಪ್ಪು ಸುಂದರಿ, ಚಿಗುರಿದ ಆಸೆ, ದೇವರಕಲ್ಲು ಎಸ್ಟೇಟ್, ಸಿರಿ, ಅಟ್ಲಾಸ್ ಹುಡುಗ ಎಂಬ ೬ ನೀಳ್ಗತೆಗಳನ್ನು ಹೊಂದಿರುವ ಕಥಾ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಬಿಡುಗಡೆ ಗೊಳಿಸಿದರು.
ನಂತರ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ತಪಸ್ಸಿದ್ದಂತೆ. ಇದರಲ್ಲಿ ತೊಡಗಿಸಿಕೊಳ್ಳಲು ಇಚ್ಛಾಶಕ್ತಿ ಮುಖ್ಯ. ಪ್ರಾಥಮಿಕವಾಗಿ ಸಾಹಿತ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಓರ್ವ ಲೇಖಕನಿಗೆ ಗ್ರಹಿಸಿಕೊಳ್ಳುವ ಗುಣ ಮುಖ್ಯ. ಸಾಹಿತ್ಯ ರಚನೆಗಳ ಸಂದರ್ಭ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ಕೃಷ್ಠವಾಗಿರುವ ಕನ್ನಡ ಪದಗಳ ಬಳಕೆಯಾಗಬೇಕು ಎಂದು ಅಭಿಪ್ರಾಯಿಸಿದರು.
ಆಶಯ ಭಾಷಣ ಮಾಡಿದ ಹಿರಿಯ ಲೇಖಕ ಕಣಿವೆ ಭಾರಧ್ವಾಜ ಕೆ. ಆನಂದತೀರ್ಥ ಅವರು, ಸಾಹಿತಿ, ಲೇಖಕರು ಎಂದೆನಿಸಿಕೊAಡವರು ತಾನೇ ಸರಿ ಎಂಬ ಭ್ರಮೆಗಳಿಂದ ಹೊರ ಬರಬೇಕು. ಓದುಗರ ಟೀಕೆ ಟಿಪ್ಪಣಿಗಳಿಗೆ ತೆರೆದುಕೊಳ್ಳಬೇಕು. ಆಲೋಚನಾ ಶಕ್ತಿ ಕುಂದಬಾರದು. ಜಿಲ್ಲೆಯ ಸಾಹಿತಿಗಳೆಲ್ಲರೂ ವಿನೂತನ ಆಲೋಚನೆ, ಚಟುವಟಿಕೆಗಳಿಗೆ ತೆರೆದುಕೊಳ್ಳಬೇಕು ಎಂದರು.
ಕೃತಿ ಪರಿಚಯ ಮಾಡಿದ ಸೋಮವಾರಪೇಟೆಯ ಹಿರಿಯ ಲೇಖಕಿ ಜಲಾ ಕಾಳಪ್ಪ ಅವರು, ಒಲವಿನ ಸವಾರಿಯಲ್ಲಿರುವ ಕಥೆಗಳು ಒಂದಕ್ಕಿAತ ಮತ್ತೊಂದು ಕುತೂಹಲ ಹಾಗೂ ಮನೋಜ್ಞವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲೆ ಹೆಚ್.ಆರ್. ಪವಿತ್ರ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಯಡವನಾಡು ಶ್ರೀ ಶಿವಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ಅಕ್ಷರ ಸ್ನೇಹಿ ಬಳಗದ ಸಹಕಾರದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಲಾವಿದೆ ಮಿಲನಾ ಭರತ್, ಲೇಖಕ ಹೇಮಂತ್ ಪಾರೇರಾ ಅವರುಗಳು ನಿರ್ವಹಿಸಿದರು.