ವೀರಾಜಪೇಟೆ, ಸೆ. ೨೪: ಜಮಾಅತೆ ಇಸ್ಲಾಮೀ ಹಿಂದ್ ವೀರಾಜಪೇಟೆ ಸ್ಥಾನೀಯ ಶಾಖೆ ಸೀರತುನ್ನಬಿ ಪ್ರಯುಕ್ತ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರö್ಯವಂತ" ಎಂಬ ವಿಷಯದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಸಭೆ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಅಧ್ಯಾತ್ಮಿಕತೆಯ ಮೂಲಕ ಲೌಕಿಕ ಬದುಕನ್ನು ಸಂಸ್ಕರಿಸುವ ವಿಧಾನವನ್ನು ಪ್ರವಾದಿ ಮುಹಮ್ಮದ್(ಸ) ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಇತರ ಹಲವು ಧಾರ್ಮಿಕ ಸುಧಾರಕರುಗಳಿಗೆ ಹೋಲಿಸಿದಲ್ಲಿ ಅವರು ಓರ್ವ ಸಂಸಾರಸ್ಥರಾಗಿದ್ದುಕೊAಡೇ ಸಮಾಜಕ್ಕೆ ಮಾದರಿ ಯೋಗ್ಯ ಶಿಕ್ಷಣವನ್ನು ನೀಡಿದರು. ಪ್ರವಾದಿ ಮುಹಮ್ಮದ್(ಸ) ಅವರ ಬದುಕು ತೆರೆದಿಟ್ಟ ಪುಸ್ತಕವಾಗಿತ್ತು. ಮಾತ್ರವಲ್ಲ, ಅವರ ಬದುಕಿನ ಎಲ್ಲಾ ಮಜಲುಗಳೂ ಇಂದು ದಾಖಲಿಸಲ್ಪಟ್ಟಿರುವುದು ವಿಶೇಷವಾಗಿದೆ. ಅವರು ಪ್ರಚಾರಪಡಿಸಿದ ಸಿದ್ದಾಂತಗಳು ಮತ್ತು ಆಶಯಗಳು ಸಮಾಜವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಂತದ್ದಾಗಿತ್ತು. ಬದುಕಿನ ನಿಖಿಲ ಕ್ಷೇತ್ರಗಳಲ್ಲೂ ದೇವನನ್ನು ಪಾಲಕ ಮತ್ತು ಪ್ರಭುವನ್ನಾಗಿ ಅಂಗೀಕರಿಸುವ ಒಂದು ಸಮಾಜವನ್ನು ಅವರು ನಿರ್ಮಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜತೆ ಕಾರ್ಯದರ್ಶಿ ರಿಯಾಝ್ ಅಹಮದ್ ಅವರು ಮಾತನಾಡಿ, ಧರ್ಮಗಳ ಮಧ್ಯೆ ಇರುವ ನಿಗೂಢತೆಗಳು ಹೋಗಲಾಡಿಸಬೇಕಾಗಿದೆ. ವಿವಿಧ ಧರ್ಮಗಳ ಮಧ್ಯೆ ಸಮಾಜದಲ್ಲಿ ಸೌಹಾರ್ದ ಸಂವಾದಗಳು ಹೆಚ್ಚಾಗಿ ನಡೆಸುವುದರಿಂದ ಪರಸ್ಪರ ಅರಿವಿನ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇಂದು ಸಮಾಜವು ಎದುರಿಸುತ್ತಿರುವ ದ್ವೇಷ, ಕೋಮುವಾದಗಳೆಂಬ ರೋಗಗಳಿಗೆ ಇದುವೇ ಪರಿಹಾರ. ವಿಶ್ವಾಸ ಮತ್ತು ವಿಜ್ಞಾನ ಅಭಿವೃದ್ಧಿಯ ಮಂತ್ರಗಳೆAದು ಕಲಿಸಿದವರು ಪ್ರವಾದಿ ಮುಹಮ್ಮದ್(ಸ) ಎಂದರು.
ತಿತಿಮತಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸ್ಥಾನೀಯ ಅಧ್ಯಕ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲುಖ್ಮಾನ್ ಖಿರಾಅತ್ ಪಠಿಸಿದರು. ಕೆ.ಟಿ. ಬಷೀರ್ ಧನ್ಯವಾದವಿತ್ತರು.