ಮಡಿಕೇರಿ, ಸೆ. ೨೪ : ಕರಿಮೆಣಸು ಬೆಳೆ ಮೇಲೆ ಸರ್ಕಾರ ಜಿಎಸ್ಟಿ ವಿಧಿಸಿರುವುದರಿಂದಾಗಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್ಟಿಯನ್ನು ತೆಗೆದುಹಾಕುವ ಮೂಲಕ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ನ ನಿರ್ದೇಶಕ ತೇಲಪಂಡ ಪೂವಯ್ಯ ಒತ್ತಾಯಿಸಿದ್ದಾರೆ.
ನಗರದ ಕ್ರಿಸ್ಟಲ್ಕೋರ್ಟ್ ಸಭಾಂಗಣದಲ್ಲಿ ನಡೆದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೂವಯ್ಯ, ಕರಿಮೆಣಸು ಫಸಲಿನ ಮೇಲೂ ಜಿಎಸ್ಟಿ ವಿಧಿಸಿರುವುದು ಸರಿಯಾದ ಕ್ರಮವಲ್ಲ. ನಿಯಮಪ್ರಕಾರವಾಗಿ ಕರಿಮೆಣಸು ಜಿಎಸ್ಟಿ ವ್ಯಾಪ್ತಿಗೆ ಸೇರಿದ್ದರೂ ಕೃಷಿ ಫಸಲಾಗಿರುವುದರಿಂದಾಗಿ ಜಿಎಸ್ಟಿ ವಿಧಿಸುವುದರಿಂದ ವಿನಾಯಿತಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿವೆ ಎಂದರು. ಕಾನೂನುಗಳನ್ನು ಏಕಪ್ರಕಾರವಾಗಿ ಬೆಳೆಗಾರರಿಗೂ
(ಮೊದಲ ಪುಟದಿಂದ) ವಿಧಿಸುವುದರಿಂದಾಗಿ ಬೆಳೆಗಾರರ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅನೇಕರು ವಿಮುಖರಾಗುವ ವಿದ್ಯಮಾನಕ್ಕೆ ಕಾರಣವಾಗಬಹುದು ಎಂದು ತೇಲಪಂಡ ಪೂವಯ್ಯ ಎಚ್ಚರಿಸಿದರು.
ಬ್ರೆಜಿಲ್, ವಿಯಟ್ನಾಂ ಸೇರಿದಂತೆ ವಿಶ್ವದ ಕಾಫಿ ಕ್ಷೇತ್ರದ ಆಗುಹೋಗುಗಳನ್ನು ಗಮನಿಸಿದರೆ ಭಾರತೀಯ ಕಾಫಿಗೆ ಉತ್ತಮ ಭವಿಷ್ಯವಿರುವುದು ಸ್ಪಷ್ಟ, ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಶೇ ೮ ರಷ್ಟು ಹೆಚ್ಚಾಗುತ್ತಿರುವುದು ಕೂಡ ಕಾಫಿ ರಂಗಕ್ಕೆ ಆಶಾದಾಯಕವಾಗಿ ಪರಿಣಮಿಸಿದೆ ಎಂದು ಪೂವಯ್ಯ ಹೇಳಿದರು,
ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೃಷಿ ಫಸಲು ನಷ್ಟಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿದೆ, ಆದರೆ ಪರಿಹಾರವನ್ನೂ ಪಾಕೃತಿಕ ವಿಕೋಪದಿಂದ ಹಾನಿಗೊಳಗಾದ ಭೂಮಿಗೂ ನೀಡಿ ಪರಿಹಾರವನ್ನು ಹೆಚ್ಚಿಸುವ ನಿಯಮ ಜಾರಿಯಾಗಬೇಕು, ಇಲ್ಲದೇ ಹೋದಲ್ಲಿ ಬೆಳೆಯೊಂದಿಗೆ ಭೂಮಿಯನ್ನು ಕೂಡ ಕಳೆದುಕೊಂಡ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದೂ ಪೂವಯ್ಯ ಕಳವಳ ವ್ಯಕ್ತಪಡಿಸಿದರು,
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಮಹಿಳೆಯರೇ ಸೇರಿ ಕಾಫಿ ಸೇವನೆಯನ್ನು ಪ್ರೋತ್ಸಾಹಿಸುವ ಸಂಘ ಸ್ಥಾಪಿಸಿ ೨೩ ವರ್ಷಗಳು ಕಳೆದಿವೆ ಸಂಘಕ್ಕೆ ಪ್ರತೀ ವರ್ಷವೂ ಯುವತಿಯರೂ ಸೇರಿದಂತೆ ಸದಸ್ಯೆಯರಾಗಿ ಹೆಚ್ಚಿನವರು ಸೇರ್ಪಡೆಯಾಗುತ್ತಿರುವುದು ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ ಎಂದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ, ಸಂಘಟನಾ ಕಾರ್ಯದರ್ಶಿ ರೀಟಾ ದೇಚಮ್ಮ, ಖಜಾಂಜಿ ಕುಮಾರಿ ಕುಂಜ್ಞಪ್ಪ ವೇದಿಕೆಯಲ್ಲಿದ್ದರು, ಸರುಸತೀಶ್ ಪ್ರಾರ್ಥಿಸಿ, ರಮ್ಯ ನರೇನ್ ಕಾಫಿ ಕೆಫೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಹಿಳಾ ಸದಸ್ಯರು ಸಂಘದ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.