ಐಗೂರು, ಸೆ. ೨೫: ನೀರು ಕಾಯಿಸಲು ಉಪಯೋಗಿಸುವ ವಿದ್ಯುತ್ ಹೀಟರ್ ಸ್ಪರ್ಶಿಸಿ ಕಾಲೇಜು ವಿದ್ಯಾರ್ಥಿಯೋರ್ವ ದುರ್ಮರಣಕ್ಕೀಡಾಗಿರುವ ದುರ್ಘಟನೆ ಐಗೂರಿನ ವಿಜಯನಗರದಲ್ಲಿ ಇಂದು ಸಂಜೆ ಸಂಭವಿಸಿದೆ.
ಐಗೂರು ಗ್ರಾ.ಪಂ. ವ್ಯಾಪ್ತಿಯ ವಿಜಯನಗರ ನಿವಾಸಿ ಮಂಜುನಾಥ್ ಹಾಗೂ ಸುಜಾತಾ ದಂಪತಿ ಪುತ್ರ, ಕುಶಾಲನಗರದ ಎಂ.ಜಿ.ಎA. ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಹೇಮಂತ್ (೧೯) ಎಂಬಾತನೇ ಆಕಸ್ಮಿಕ ಅವಘಡದಿಂದ ಮೃತಪಟ್ಟ ದುರ್ದೈವಿ.
ಇಂದು ಬೆಳಿಗ್ಗೆ ಕಾಲೇಜಿಗೆ ತೆರಳಿ ಸಂಜೆ ೬ ಗಂಟೆಗೆ ಮನೆಗೆ ವಾಪಸ್ಸಾದ ಹೇಮಂತ್, ಸ್ನಾನ ಮಾಡುವ ಸಲುವಾಗಿ ಬಿಸಿ ನೀರು ಕಾಯಿಸಿಕೊಳ್ಳಲು ಪಾತ್ರೆಯೊಂದರಲ್ಲಿ ತಣ್ಣೀರು ತುಂಬಿ ವಿದ್ಯುತ್ ಚಾಲಿತ ಹೀಟರ್ ಹಾಕಿದ್ದನು. ಈ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿರುವ ಪರಿಣಾಮ ಹೇಮಂತ್ ದೂರಕ್ಕೆ ಎಸೆಯಲ್ಪಟ್ಟಿದ್ದ. ದಿಢೀರ್ ಆಘಾತದಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಹೇಮಂತ್ ನನ್ನು ತಕ್ಷಣ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ಮೂಲಕ ಜೀವ ಉಳಿಸಿಕೊಳ್ಳಲು ಮುಂದಾದರೂ ಸಹ ವಿಧಿ ಬರಹವೇ ಬೇರೆಯಾಗಿದ್ದು, ದಾರಿ ಮಧ್ಯೆಯೇ ಇಹಲೋಕ ತ್ಯಜಿಸಿರುವ ಬಗ್ಗೆ ವೈದ್ಯರು ದೃಢಪಡಿಸಿದರು.
ನಂತರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕೊಂಡೊಯ್ಯಲಾಯಿತು.
ತಂದೆ ಬಂದ ದಿನವೇ ದುರಂತ
ಮೃತ ಹೇಮಂತ್ನ ತಂದೆ ಮಂಜುನಾಥ್ ಅವರು ಈ ಹಿಂದೆ ಕಾಜೂರು ಸೇರಿದಂತೆ ಸುತ್ತಮುತ್ತಲ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಚೆನ್ನೈಗೆ ತೆರಳಿದ್ದರು. ಮನೆಯಲ್ಲಿ ತಾಯಿ, ಸಹೋದರಿ ಹಾಗೂ ಅಜ್ಜಿಯೊಂದಿಗೆ ಹೇಮಂತ್ ನೆಲೆಸಿದ್ದ. ಚೆನ್ನೈನಲ್ಲಿದ್ದ ತಂದೆ ಮಂಜುನಾಥ್ ಅವರು ಇಂದು ಮನೆಗೆ ಆಗಮಿಸಿದ್ದರು. ಅವರು ಬಂದ ಸಂತೋಷದ ನಡುವೆಯೇ ಕಾಲೇಜಿಗೆ ತೆರಳಿ ವಾಪಸ್ಸಾಗಿದ್ದ ಹೇಮಂತ್ ವಿಧಿಯಾಟಕ್ಕೆ ಓಗೊಟ್ಟಿರುವುದು ದುರಂತವೇ ಸರಿ ಎಂದು ಸ್ಥಳೀಯರು ಕಣ್ಣೀರಾಕಿದ್ದಾರೆ.
ಎದೆಮಟ್ಟಕ್ಕೆ ಬೆಳೆದಿದ್ದ ಪುತ್ರ ಕಣ್ಣೆದುರಲ್ಲೇ ದುರಂತ ಅಂತ್ಯಕ್ಕೆ ಒಳಪಟ್ಟಿರುವುದು ಮಾತೃ ಹೃದಯವನ್ನು ಇನ್ನಿಲ್ಲದಂತೆ ಕಲಕಿದೆ. ತಂದೆಯ ಆರ್ತನಾದಕ್ಕೆ ಸಂತೈಸುವಿಕೆಗಳು ಸಾಲದಾಗಿದೆ. ಖುಷಿಯಿದ್ದ ಮನೆಯಲ್ಲಿ ಪೋಷಕರು ಹಾಗೂ ಸಂಬAಧಿಕರ ಗೋಳಾಟ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ.