ಕುಶಾಲನಗರ, ಸೆ. ೨೫ : ಪೌರ ಕಾರ್ಮಿಕರು ದಿನನಿತ್ಯ ತಮ್ಮ ಜೀವದ ಹಂಗುತೊರೆದು ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನಾರ್ಹ ಕಾರ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು.

ಕುಶಾಲನಗರ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಸ್ವಾಸ್ಥ್ಯವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ, ಮಾತನಾಡಿ, ಕಾಯಕವೇ ಕೈಲಾಸ ಎಂಬ ತತ್ವದಂತೆ ಕೆಲಸ ಮಾಡುವ ಪೌರ ಕಾರ್ಮಿಕರು ಪಟ್ಟಣದ ಸ್ವಚ್ಚತೆಯ ಜೊತೆಗೆ ನಾಗರಿಕರ ಆರೋಗ್ಯದ ದೃಷ್ಟಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ಸ್ವಚ್ಚತೆ ಮಾಡುವ ಮೂಲಕ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೊರೋನ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಸ್ಮರಣೀಯವಾದುದು ಎಂದರು.

ಪುರಸಭೆ ಸದಸ್ಯ ಜಯವರ್ಧನ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ವೈದ್ಯರಾಗಿದ್ದಾರೆ ಎಂದರೆ ತಪ್ಪಾಗಲಾರದು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವ ಮೂಲಕ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದರು.

ಇದೇ ಸಂದರ್ಭ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಉಪಾಧ್ಯಕ್ಷ ಮೋಹನ್ ಕುಮಾರ್, ಮಡಿಕೇರಿ ಶಾಖಾ ಅಧ್ಯಕ್ಷ ಸತ್ಯ ನಾರಾಯಣ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಗಣೇಶ್, ಉಪಾಧ್ಯಕ್ಷೆ ರಶ್ಮಿ, ಪುರಸಭೆ ಅಭಿಯಂತರ ರಂಗರಾಮ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಸದಸ್ಯರಾದ ವಿ.ಎಸ್. ಆನಂದ್ ಕುಮಾರ್, ಜಯಲಕ್ಷಿö್ಮ, ಸುರಯ್ಯಬಾನು, ಶೈಲಾ ಕೃಷ್ಣಪ್ಪ, ಜಯಲಕ್ಷ್ಮಮ್ಮ, ನಾಮನಿರ್ದೇಶಿತ ಸದಸ್ಯರಾದ ಶಿವಶಂಕರ್, ಪ್ರಕಾಶ್, ನವೀನ್, ಜಗದೀಶ್ ಮತ್ತಿತರರು ಇದ್ದರು.