ಗೋಣಿಕೊಪ್ಪಲು, ಸೆ. ೨೪: ಕೊಡಗಿನಲ್ಲಿ ಆದಿವಾಸಿಗಳು ಸೇರಿದಂತೆ ಅನೇಕ ಬಡವರು ನಿವೇಶನವಿಲ್ಲದೆ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರಿ ಭೂಮಿಯನ್ನು ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವುದರಿಂದ ನಿವೇಶನ ರಹಿತರಿಗೆ ಸಮಸ್ಯೆ ಎದುರಾಗಲಿದೆ. ಸರ್ಕಾರ ಭೂಮಿ ಇರುವವರಿಗೆ ಮತ್ತೆ ಭೂಮಿಯನ್ನು ಗುತ್ತಿಗೆ ರೂಪದಲ್ಲಿ ನೀಡುವುದನ್ನು ತಡೆಹಿಡಿಯಬೇಕು. ಯಾವುದೇ ಕಾರಣಕ್ಕೂ ಈ ಕಾಯಿದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮುಂದಾಳತ್ವದಲ್ಲಿ ನೂರಾರು ಸದಸ್ಯರು ನಗರದ ಪಾಲಿಬೆಟ್ಟ ರಸ್ತೆಯ ಜಂಕ್ಷನ್ ಬಳಿ ಜಮಾವಣೆಗೊಂಡು ನಂತರ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿ, ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡರು.

ಹೋರಾಟಗಾರರನ್ನು ಉದ್ದೇಶಿಸಿ ಪರಶುರಾಮ್ ಮಾತನಾಡಿ, ಕೊಡಗಿನಲ್ಲಿ ಭೂಮಿ ಇಲ್ಲದೆ ಆದಿವಾಸಿಗಳು ಕಾಫಿ ಮಾಲೀಕರ ತೋಟದ ಲೈನ್‌ಮನೆಯಲ್ಲಿ ವಾಸವಿದ್ದಾರೆ. ಅನೇಕ ಹೋರಾಟ ನಡೆಸಿದರೂ ಇಲ್ಲಿಯ ತನಕ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿಕೊಡುವಲ್ಲಿ ಸರಕಾರ ವಿಫಲವಾಗಿದೆ. ದಲಿತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಖಂಡನೆ

ಬೆAಗಳೂರಿನ ಬಿಬಿಎಂಪಿ ಪೌರ ಕಾರ್ಮಿಕರ ಮೇಲಿನ ಜಾತಿನಿಂದನೆ ಮತ್ತು ದೌರ್ಜನ್ಯವನ್ನು ಖಂಡಿಸುತ್ತೇವೆ. ಶಾಸಕ ಮುನಿರತ್ನರವರ ಶಾಸಕ ಸ್ಥಾನವನ್ನು ಕೂಡಲೇ ವಜಾಗೊಳಿಸಿ, ನ್ಯಾಯಕೊಡಿಸುವಂತೆ ಇದೇ ವೇಳೆ ಆಗ್ರಹಿಸಿದರು. ಶಾಸಕ ಮುನಿರತ್ನ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸುವಂತೆ ಮನವಿ ಮಾಡಿದರು.

ಈ ಸಂಬAಧ ಮನವಿ ಪತ್ರವನ್ನು ಪೊನ್ನಂಪೇಟೆ ಪೊಲೀಸ್ ಠಾಣೆಯ ಅಧಿಕಾರಿ ವೆಂಕಟೇಶ್‌ರವರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಯಿತು. ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಬಿ. ಮುರುಗ, ತಾಲೂಕು ಸಂಚಾಲಕ ಕುಮಾರ್, ವಿಜಯ, ಸೋನಿಯಾ, ಶೀಲಾ, ಲೋಕೇಶ್, ಮಂಜು, ಸುರೇಶ್, ಮಣಿ, ನಾಸರ್ ಸೇರಿದಂತೆ ವಿವಿಧ ಗ್ರಾಮ ಸಮಿತಿಯ ಪದಾಧಿಕಾರಿಗಳು, ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.