ಕಣಿವೆ, ಸೆ. ೨೪: ಕಣಿವೆ ಬಳಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ಧಾಳಿಗೆ ತುತ್ತಾಗಿ ಬಲಗಾಲು ಹಾನಿಗೊಳಗಾಗಿರುವ ವೆಂಕಟಮ್ಮ ಅವರ ಮನೆಗೆ ಶಾಸಕ ಡಾ. ಮಂತರ್‌ಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಗ್ರಾಮದ ಕೂಲಿ ಕಾರ್ಮಿಕ ಬಡ ಮಹಿಳೆಯಾಗಿದ್ದ ವೆಂಕಟಮ್ಮ ಬೆಳಿಗ್ಗೆ ಬಹಿರ್ದೆಸೆಗೆಂದು ಕಾಡಂಚಿನ ತಮ್ಮ ಜಮೀನಿಗೆ ತೆರಳಿದ್ದಾಗ ಹಠಾತ್ತನೇ ಧಾವಿಸಿದ ಕಾಡಾನೆಯೊಂದು ಏಕಾಏಕಿ ವೆಂಕಟಮ್ಮ ಅವರ ಮೇಲೆ ಧಾಳಿ ನಡೆಸಿತ್ತು.

ಪರಿಣಾಮ ೬೫ ರ ವಯೋಮಾನದ ವೆಂಕಟಮ್ಮ ಅವರ ಬಲಗಾಲು ಪೂರ್ಣವಾಗಿ ಜಖಂಗೊAಡಿತ್ತು. ಬಳಿಕ ಅರಣ್ಯಾಧಿಕಾರಿಗಳು ಇಲಾಖೆಯ ವತಿಯಿಂದ ಚಿಕಿತ್ಸೆ ಕೊಡಿಸಿದ್ದರು. ಆದಾಗ್ಯೂ ವೆಂಕಟಮ್ಮ ಅವರ ಕಾಲು ಗುಣಮುಖವಾಗದೇ ಮನೆಯಲ್ಲಿ ನೋವಿನಲ್ಲಿ ದಿನಗಳೆಯುತ್ತಿದ್ದ ಮಾಹಿತಿ ಪಡೆದ ಶಾಸಕ ಡಾ. ಮಂತರ್‌ಗೌಡ ಬೆಳಿಗ್ಗೆ ಹೆಬ್ಬಾಲೆ ಬಳಿಯ ಚಿನ್ನೇನಹಳ್ಳಿಯ ಕಾಡಂಚಿನ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಇಲಾಖೆ ವತಿಯಿಂದ ನೀಡಲಾಗುವುದು ಎಂದು ಶಾಸಕರು ಅಭಯ ನೀಡಿದರು. ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪಕ್ಷದ ಪ್ರಮುಖರಾದ ನಟೇಶ್ ಗೌಡ ಮತ್ತಿತರರು ಇದ್ದರು.