ಸಿದ್ದಾಪುರ, ಸೆ. ೨೩ ಹಿಂದೂಗಳಿಗೆ ಶವಸಂಸ್ಕಾರ ಮಾಡಲು ಶಾಶ್ವತ ಜಾಗ ನೀಡುವಂತೆ ಹಾಗೂ ಒತ್ತುವರಿ ಯಾಗಿರುವ ಸ್ಮಶಾನವನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ನೆಲ್ಲಿಹುದಿಕೇರಿ ಗ್ರಾ.ಪಂ ಕಚೇರಿ ಎದುರು ಅಣಕು ಶವ ಪ್ರದರ್ಶಿಸಿ ಪ್ರತಿಭಟನೆ ನಡೆಯಿತು.

ನೆಲ್ಲಿಹುದಿಕೇರಿ ಗ್ರಾ.ಪಂ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅಣಕು ಶವವನ್ನು ಮುಂದಿಟ್ಟು ,ಗ್ರಾ.ಪಂ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭ ಪಕ್ಷದ ಪ್ರಮುಖ ಪಿ.ಆರ್. ಭರತ್ ಮಾತನಾಡಿ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬದುಕುತ್ತಿರುವ ಬಹುಸಂಖ್ಯಾತ ಬಡ ಹಿಂದೂಗಳಿಗೆ ಶವಸಂಸ್ಕಾರ ಮಾಡಲು ಸ್ಮಶಾನ ಇಲ್ಲದಾಗಿದ್ದು, ಶವಸಂಸ್ಕಾರಕ್ಕೆ ಕಾವೇರಿ ನದಿದಡದಲ್ಲಿರುವ ಕುಸಿಯುತ್ತಿರುವ ಅಂಗೈ ಅಗಲ ಜಾಗವನ್ನು ಆಶ್ರಯಿಸ ಬೇಕಾದ ದುಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಮಳೆಗಾಲದಲ್ಲಿ ನದಿದಡ ಸಂಪೂರ್ಣ ಮುಳುಗಡೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಪಕ್ಕದ ಗ್ರಾಮಗಳನ್ನು ಆಶ್ರಯಿಸಬೇಕಾಗಿದೆ.

ನೆಲ್ಲಿಹುದಿಕೇರಿ ಗ್ರಾಮದಲ್ಲಿ ಮಾತ್ರ ಹಿಂದೂಗಳಿಗೆ ಶವಸಂಸ್ಕಾರ ಮಾಡಲೆಂದು ೧.೦೮ ಏಕರೆ ಜಾಗ ಇದ್ದು ಅದು ಒತ್ತುವರಿಯಾಗಿದೆ. ಈ ವಿಚಾರವನ್ನು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ ದಾಖಲೆ ಸಹಿತ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮ ಪಂಚಾಯಿತಿಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ಬಗೆಹರಿಸಲು ಮುಂದಿನ ತಿಂಗಳ ಹತ್ತನೇ ತಾರೀಕಿನವರೆಗೆ ಗಡುವು ನೀಡಲಾಗುವುದು ಮತ್ತೊಮ್ಮೆ ಗ್ರಾ.ಪಂ ನಿರ್ಲಕ್ಷö್ಯ ತೋರಿದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ಶಿವರಾಮ್ ಮಾತನಾಡಿ ಗ್ರಾಮಕ್ಕೆ ಒಂದು ಸುಸಜ್ಜಿತ ಸ್ಮಶಾನ ಒದಗಿಸುವುದು ಗ್ರಾಮ ಪಂಚಾಯಿತಿಯ ಕರ್ತವ್ಯವಾಗಿದೆ. ಪಕ್ಕದ ಸಣ್ಣ ಸಣ್ಣ ಗ್ರಾಮಗಳಲ್ಲಿ ಹಿಂದೂ ರುದ್ರ ಭೂಮಿಗಳಿವೆ. ಆದರೆ ಬೆಳೆಯುತ್ತಿರುವ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಇಂದಿಗೂ ಹಿಂದುಗಳು ಕಾವೇರಿ ನದಿ ದಡವನ್ನೇ ಶವಸಂಸ್ಕಾರಕ್ಕೆ ಆಶ್ರಯಿಸುತ್ತಿರುವುದು ವಿಷಾದಕರ ಎಂದರು.

ಪಕ್ಷದ ಪ್ರಮುಖರಾದ ರಮೇಶ್ ಮಾತನಾಡಿ ಆರ್ ಟಿಸಿ ಯಲ್ಲಿ ಸ್ಮಶಾನ ಎಂದು ಸ್ಪಷ್ಟವಾಗಿ ಬರೆದಿದ್ದರೂ ಒತ್ತುವರಿ ದಾರರಿಂದ ಜಾಗವನ್ನು ವಶಪಡಿಸಿ ಕೊಳ್ಳಲು ಅಧಿಕಾರಿಗಳಿಗೆ ಸಾಧ್ಯ ವಾಗದೇ ಇರುವುದು ಅಧಿಕಾರಿಗಳ ವೈಫಲ್ಯತೆ ಎಂದು ಹೇಳಿದರು.

ಇದೇ ಸಂದರ್ಭ ಪ್ರತಿಭಟನಾ ಕಾರರು ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ಪತ್ರ ನೀಡಿದರು. ಬಳಿಕ ಪ್ರತಿಭಟನಾ ಕಾರರು ನೆಲ್ಲಿಹುದಿಕೇರಿಯ ಬೆಟ್ಟದ ಕಾಡುವಿನ ಕಾವೇರಿ ನದಿದಡದಲ್ಲಿ ಪ್ರತಿಭಟನೆ ಅಂಗವಾಗಿ ಅಣಕು ಶವಸಂಸ್ಕಾರವನ್ನು ನೆರವೇರಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಉದಯ, ಮೊಣ್ಣಪ್ಪ, ಗ್ರಾಮಸ್ಥರಾದ ರಮೇಶ್, ಸುರೇಶ್, ಸೇರಿದಂತೆ ಇನ್ನಿತರರು ಹಾಜರಿದ್ದರು.