ಮಡಿಕೇರಿ, ಸೆ. ೨೪: ಚೆಟ್ಟಿಮಾನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಶಾಲಾ ಕಾಲೇಜುಗಳ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಜನಪದ ಗೀತೆ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಕುಂದಚೇರಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಮಾಜಿ ಸೈನಿಕ ಪೊಡನೊಳನ ದಿನೇಶ್ ಉದ್ಘಾಟಿಸಿ, ಪ್ರತಿಯೊಬ್ಬರು ಶಿಸ್ತು ಮತ್ತು ರಾಷ್ಟç ಪ್ರೇಮವನ್ನು ಮೈಗೂಡಿಸಿ ಕೊಂಡಾಗ ಬದುಕು ಸುಂದರವಾಗಿರುತ್ತದೆ.

ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎಸ್. ಅಣ್ಣಯ್ಯ ಮಾತನಾಡಿ, ನಮ್ಮ ದೇಶ ನಮ್ಮ ಹೆಮ್ಮೆ. ಸದಾ ನಾವು ದೇಶ ಪ್ರೇಮಿಗಳಾಗಿಯೇ ಬದುಕಿದಾಗ ಉತ್ತಮ ರಾಷ್ಟç ನಿರ್ಮಾಣ ಆಗುತ್ತದೆ. ಆಗ ಈ ರೀತಿಯ ಕಾರ್ಯಕ್ರಮಕ್ಕೆ ಅರ್ಥ ಬರಲು ಸಾಧ್ಯ ಎಂದು ಹೇಳಿದರು. ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೇಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪಾಜೆ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎ.ಎಸ್. ಶ್ರೀಧರ್, ಮುಖ್ಯ ಶಿಕ್ಷಕಿ ಬಿ.ಪಿ. ಗೀತಾಂಜಲಿ, ಜಿಲ್ಲಾ ಸಂಘಟಕಿ ದಮಯಂತಿ, ತೀರ್ಪುಗಾರರಾದ ನಾಟೋಳಂಡ ಸರೋಜ ವಿಜು, ಸಿ.ಆರ್.ಪಿ. ಪವಿತ್ರ, ವಿವಿಧ ಶಾಲೆಗಳ ಶಿಕ್ಷಕರು, ಚೆಟ್ಟಿಮಾನಿ ಶಾಲೆಯ ಶಿಕ್ಷಕಿಯರು, ಕಚೇರಿ ಸಹಾಯಕಿ ಗಾಯನ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿ ಸ್ಪರ್ಧಿಗಳು ಹಾಜರಿದ್ದರು.

ಸ್ಥಳೀಯ ಸಂಸ್ಥೆ ಸಹಕಾರ್ಯದರ್ಶಿ ಬಿ.ಕೆ. ಲಲಿತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉಷಾರಾಣಿ ಸ್ವಾಗತಿಸಿ, ವಂದಿಸಿದರು.