ಪೊನ್ನಂಪೇಟೆ, ಸೆ. ೨೩: ಪ್ರವಾದಿ ಮುಹಮ್ಮದರ ಜೀವನವು ಒಂದು ತೆರೆದ ಪುಸ್ತಕವಾಗಿದೆ. ಅವರು ತಮ್ಮ ಖಾಸಗಿ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಾಮಾಜಿಕ ಜೀವನವನ್ನು ಮಾದರಿಯಾಗಿ ಹಾಗೂ ಸಮುದಾಯವನ್ನು ಕಲ್ಯಾಣಕಾರಿಯ ನ್ನಾಗಿ ರೂಪಿಸಿದವರು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಏSWಂ) ಯು.ಎ.ಇ. ರಾಷ್ಟಿçÃಯ ಸಮಿತಿ ವತಿಯಿಂದ ದುಬೈನ ದೇರಾದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ‘ವಿಶ್ವ ವಿಮೋಚನೆಯ ಹಾದಿ -ಪ್ರವಾದಿ’ ಎಂಬ ಧ್ಯೇಯವಾಕ್ಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮಿಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಈ ಲೋಕದಲ್ಲಿ ಯಾವುದೇ ಸ್ಮಾರಕಗಳಾಗಲಿ, ಅವರ ಚಿತ್ರಗಳಾಗಲಿ, ಪ್ರತಿಮೆಗಳಾಗಲಿ ಎಲ್ಲಿಯೂ ಕಾಣುವುದಿಲ್ಲ. ಆದರೂ ಅವರು ಆರಾಧಿಸಲ್ಪಡುವ ಆದರ್ಶ ಪುರುಷರಾಗಿದ್ದಾರೆ ಎಂದು ನುಡಿದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಬಡ ಹೆಣ್ಣು ಮಕ್ಕಳ ಮದುವೆ, ಕಡು ಬಡವರಿಗೆ ಮನೆ ನಿರ್ಮಾಣ, ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವು, ಅಸಹಾಯಕರಿಗೆ ಸಹಾಯಧನ ವಿತರಣೆ ಮೊದಲಾದ ಸಾಮಾಜಿಕ ಸೇವೆಗಳ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಹಿರಿಯ ಧಾರ್ಮಿಕ ವಿದ್ವಾಂಸರಾದ ಸೈಯದ್ ಖಲೀಲ್ ಇಬ್ರಾಹಿಂ ಬುಖಾರಿ ತಂಗಳ್ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು. ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿದ್ದ ಹಂಝ ಮಿಸ್ಬಾಯ್ ಉಸ್ತಾದ್, ಪ್ರವಾದಿ ಮುಹಮ್ಮದರ ಆದರ್ಶ ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನ ಜಿಸಿಸಿ ಅಧ್ಯಕ್ಷರು ಮತ್ತು ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹೆಚ್. ಎ. ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ದುಬೈನ ಉದ್ಯಮಿ ಅಶ್ರಫ್ ಎಮ್ಮೆಮಾಡು ಸಮಾವೇಶದಲ್ಲಿ ಮಾತನಾಡಿದರು. ಇದಕ್ಕೂ ಮೊದಲು ವಿದ್ವಾಂಸರಾದ ಜಲೀಲ್ ನಿಜಾಮಿ ಎಮ್ಮೆಮಾಡು ಸಮಾವೇಶವನ್ನು ಉದ್ಘಾಟಿಸಿದರು. ದುಬೈ ಮಿಲಾದ್ ಸಮಾವೇಶದ ಅಂಗವಾಗಿ ಕೊಡಗಿನ ಅನಿವಾಸಿ ಕನ್ನಡಿಗರಿಗೆ ಮತ್ತು ಅವರ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸುನ್ನಿ ಸಂಘಟನೆಗಳ ಪ್ರಮುಖರಾದ ಶಾಫಿ ಸಖಾಫಿ ಕೊಂಡAಗೇರಿ, ರಫೀಕ್ ಹಾಜಿ ಚಾಮಿಯಾಲ, ಇಬ್ರಾಹಿಂ ನಾಪೋಕ್ಲು, ಮುಜಮ್ಮಿಲ್ ಪಾಲಿಬೆಟ್ಟ, ಝಮೀರ್ ಬೆಂಗಳೂರು, ಕೆ.ಎಸ್. ಡಬ್ಲ್ಯೂ. ಎ. ಪದಾಧಿಕಾರಿಗಳಾದ ಜುಬೈರ್ ಎಮ್ಮೆಮಾಡು, ಮುಜೀಬ್ ಕಡಂಗ, ನಿಸಾರ್ ಗುಂಡಿಕೆರೆ, ನಯಾಜ್ ನಾಪೋಕ್ಲು, ಅಶ್ರಫ್ ಕುಂಜಿಲ, ಮತ್ತಿತರರು ಉಪಸ್ಥಿತರಿದ್ದರು. ಶಫೀಕ್ ಹಿಷಾಮಿ ಎಮ್ಮೆಮಾಡು ಸ್ವಾಗತಿಸಿದರು. ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಸರ್ ನಹೀಮಿ ಹಾಗೂ ರಿಯಾಜ್ ಕೊಂಡAಗೇರಿ ಕಾರ್ಯಕ್ರಮ ನಿರೂಪಿಸಿದರು. ಜುಬೈರ್ ಎಮ್ಮೆಮಾಡು ವಂದಿಸಿದರು.

-ರಫೀಕ್ ತೂಚಮಕೇರಿ