ಮಡಿಕೇರಿ, ಸೆ. ೨೨: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಸಂಪಾಜೆಯ ವಾರ್ಷಿಕ ಮಹಾಸಭೆ ನಾಪೋಕ್ಲು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಧನಂಜಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಸ್ಥೆಯು ಶಿಸ್ತಿಗೆ ಹೆಸರಾಗಿದೆ. ಶಿಕ್ಷಕರು ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ನ ಮಹತ್ವವನ್ನು ತಿಳಿಸಬೇಕು. ಕೌಶಲ್ಯಗಳನ್ನು ಕಲಿಸಿ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂಬೇಡ್ಕರ್ ಶಾಲೆಯ ಪ್ರಾಂಶುಪಾಲೆ ನೀತಾ ಕೆ.ಡಿ., ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿ ಎಲ್ಲರಿಗೂ ಶುಭ ಹಾರೈಸಿದರು. ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯು ಅವರು ಸ್ಥಳೀಯ ಸಂಸ್ಥೆಯಲ್ಲಿ ರಾಜ್ಯ ಸಂಸ್ಥೆಯ ನಿಗದಿತ ಕಾರ್ಯಕ್ರಮಗಳಲ್ಲದೇ ಹಲವಾರು ವಿನೂತನ ಕಾರ್ಯಕ್ರಮಗಳಾಗುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಸಂಘಟಕರಾದ ದಮಯಂತಿ ಯು.ಸಿ. ಅವರು ರಾಜ್ಯ ಸಂಸ್ಥೆಯವರು ಪ್ರಕಟಿಸುತ್ತಿರುವ ವಾರ್ಷಿಕ ಕಾರ್ಯಕ್ರಮಗಳ ಕೈಪಿಡಿ ಪುಸ್ತಕವನ್ನು ಬಿಡುಗಡೆಗೊಳಿಸಿ ಈ ಪುಸ್ತಕದಲ್ಲಿರುವ ಮಾಹಿತಿಯನ್ನು ಎಲ್ಲರೂ ತಿಳಿದು ಅದರಂತೆ ಕಾರ್ಯಕ್ರಮ ನಡೆಸಬೇಕೆಂದು ಹೇಳಿದರು. ತರಬೇತಿ ಹೊಂದಿದ ಶಿಕ್ಷಕರು ಸಭೆ ಮತ್ತು ಸಮಾರಂಭಗಳಿಗೆ ಬರುವಾಗ ಯಾವುದೇ ಮುಜುಗರಪಟ್ಟುಕೊಳ್ಳದೆ ಸಮವಸ್ತçವನ್ನು ಧರಿಸಿಕೊಂಡು ಬರಬೇಕು. ಅದಕ್ಕೆ ವಿಶೇಷವಾದ ಗೌರವವಿದೆ. ಅದನ್ನು ನಾವುಗಳು ಉಳಿಸಿಕೊಳ್ಳಬೇಕೆಂದು ಹೇಳಿದರು. ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ರಂಜಿತ್ ಕೆ.ಯು. ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಪುನಃಶ್ಚೇತನ ಮಾಹಿತಿ ನೀಡಿ ಎಲ್ಲಾ ಶಾಲೆಗಳಲ್ಲಿ ದಳವಿರುವುದನ್ನು ಖಾತರಿಪಡಿಸಬೇಕು. ಶಿಕ್ಷಣ ಇಲಾಖೆಯ ಒಂದು ಭಾಗವಾಗಿ ನಾವು ಕೆಲಸ ಮಾಡುತ್ತಿರುವುದರಿಂದ ನಮ್ಮ ಶಾಲಾ ಮಕ್ಕಳಿಗೆ ಆಗುತ್ತಿರುವ ಪ್ರಯೋಜನಗಳನ್ನು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ವರದಿ ವಾಚಿಸಿ ಹಿಂದಿನ ಸಾಲಿನ ಆಯೋಜಿತ ಕಾರ್ಯಕ್ರಮಗಳ ಸಮಗ್ರ ವರದಿ ನೀಡಿದರು. ಸಹಕಾರ್ಯದರ್ಶಿ ಲಲಿತ ವಾರ್ಷಿಕ ಆಯವ್ಯಯ ಮಂಡನೆ ಮಾಡಿದರು. ಸ್ಕೌಟ್ ಮಾಸ್ಟರ್ ಶಾಮಿಲಿ ಅಂದಾಜು ಆಯ ವ್ಯಯ ಮಂಡಿಸಿದರು. ಸ್ಕೌ.ಮಾ. ಅನೂಷ ವಾರ್ಷಿಕ ಕಾರ್ಯ ಕ್ರಮಗಳ ಪಟ್ಟಿಯನ್ನು ಓದಿದರು. ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಸಂತಿ ಎಂ.ಎA. ಹಾಗೂ ವಿವಿಧ ಶಾಲೆಯ ಸುಮಾರು ೩೫ ಮಂದಿ ಶಿಕ್ಷಕರು ಉಪಸ್ಥಿತರಿದ್ದರು. ಸ್ಕೌ.ಮಾ. ಸುಮಿತ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.