ಮಡಿಕೇರಿ, ಸೆ.೨೩: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಸೋಮವಾರಪೇಟೆ ಗೆಜ್ಜೆ ಹಣಕೋಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈನಲ್ಲಿ ಹಿಡಿದಿಟ್ಟುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಸಾಧ್ಯವಾದಷ್ಟು ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಸೇವಿಸುವುದು ಉತ್ತಮ. ಹಾಗೆಯೇ ಇಲಾಖಾ ವತಿಯಿಂದ ದೊರೆಯುವ ಹಲವಾರು ಯೋಜನೆಯ ಕುರಿತು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಮಾಹಿತಿಯ ಅವಶ್ಯಕತೆ ಇದೆ. ಈ ಕಾರ್ಯಕ್ರಮದ ಮುಖಾಂತರ ಎಲ್ಲಾ ಜನರ ಮನೆಗಳಿಗೆ ಮಾಹಿತಿ ಪಸರಿಸಲಿ, ಉತ್ತಮ ಸಮಾಜ ನಿರ್ಮಾಣವಾಗಲಿ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಣ್ ಅಭಿಯಾನ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಗರ್ಭಿಣಿ, ಬಾಣಂತಿ, ಮಕ್ಕಳ ಅಪೌಷ್ಟಿಕತೆ, ಸಾವಿನ ಪ್ರಮಾಣ ಕಡಿಮೆ ಗೊಳಿಸುವಿಕೆ, ರಕ್ತಹೀನತೆ, ಈ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಷೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ ಇಲಾಖೆಯ ಯೋಜನೆಯಾದ ಮಾತೃವಂದನಾ ಯೋಜನೆ, ಭಾಗ್ಯಲಕ್ಷಿ ಯೋಜನೆ, ಮಹಿಳಾ ದೌರ್ಜನ್ಯಕ್ಕೆ ಸಂಬAಧಿಸಿದAತೆ ಹಾಗೂ ಮಕ್ಕಳ ಸಹಾಯವಾಣಿ ಇನ್ನಿತರ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಮಾತೃವಂದನಾ ಯೋಜನೆಗೆ ಗರ್ಭಿಣಿ ಮಹಿಳೆಯರಿಂದ ಅರ್ಜಿಯನ್ನು ಸ್ವಿಕರಿಸಲಾಯಿತು.
ಊರಿನ ಗರ್ಭಿಣಿ, ಬಾಣಂತಿ, ಮಹಿಳೆಯರು ಗ್ರಾಮಸ್ಥರು, ಗ್ರಾಮದ ವಿ.ಅರ್.ಡಬ್ಲ್ಯೂ ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ನಿರೂಪಿಸಿದರು, ಪೂರ್ಣಿಮ ಪ್ರಾರ್ಥಿಸಿದರು. ಸವಿತ ವಂದಿಸಿದರು.