ಮಡಿಕೇರಿ, ಸೆ. ೨೩: ಮಡಿಕೇರಿ ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಸಕ ಡಾ ಮಂತರ್ ಗೌಡ ಅವರ ವಿಶೇಷ ಪ್ರಯತ್ನದಿಂದ ಪರಿಹಾರ ದೊರಕಿದಂತಾಗಿದೆ. ಸುಮಾರು ೩೫ ಸಾವಿರ ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಕೂಟು ಹೊಳೆ ಘಟಕದಲ್ಲಿ ೩೦೦ ಹೆಚ್.ಪಿ ಯ ಎರಡು ಮೋಟಾರು ಪಂಪ್ ಇದ್ದು ಹನ್ನೆರಡರಿಂದ ಹದಿನಾರು ಗಂಟೆಗಳ ಕಾಲ ಚಾಲನೆ ಮಾಡುವ ಸಾಮರ್ಥ್ಯ ಹೊಂದಿತ್ತು. ಕೆಲವೊಮ್ಮೆ ಒಂದು ಮೋಟಾರ್ ಕೆಟ್ಟು ನಿಂತಾಗ ಕೇವಲ ೮ ಗಂಟೆಗಳ ಕಾಲ ಪಂಪ್ ಮಾಡುವುದರಿಂದ ನೀರು ಪೂರೈಕೆಯಲ್ಲಿ ವ್ಯತಯ ಉಂಟಾಗುತ್ತಿತ್ತು.

ಇದನ್ನು ಕಳೆದ ವರ್ಷ ಗಮನಿಸಿದ ಮಂತರ್ ಗೌಡ ಅವರು ನಗರಸಭೆಯಿಂದ ವೆಚ್ಚ ಭರಿಸುವುದು ಅಸಾಧ್ಯವಾದ ಹಿನೆÀ್ನಲೆಯಲ್ಲಿ ವಿಶೇಷವಾಗಿ ಅನುದಾನ ಬಳಕೆಗೆ ನಿರ್ಧರಿಸಿದ್ದರು. ಅದರಂತೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ ೪೬ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ೩೦೦ ಹೆಚ್.ಪಿ. ಸಾಮರ್ಥ್ಯದ ಪಂಪ್ ಅಳವಡಿಕೆಗೆ ನಿರ್ದೇಶನ ನೀಡಿದ ಮೇರೆಗೆ ಮೂರನೆ ಯಂತ್ರವನ್ನು ಅಳವಡಿಸಿ ಇಂದು ಕಾರ್ಯಾರಂಭ ಮಾಡಲಾಗಿದೆ.

ನೂತನ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಮಂತರ್ ಗೌಡ, ಮಡಿಕೇರಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ಹಂಬಲ ಹೊಂದಿದ್ದೇನೆ. ಇದಕ್ಕೆ ಜನರ ಸಹಕಾರ ಮತ್ತು ಬೆಂಬಲ ಬೇಕೆಂದು ಕೋರಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಶಾಸಕ ಮಂತರ್ ಗೌಡ ನಗರದ ಜನತೆಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದಾರೆ ಎಂದರು.

ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಸಭೆಯ ಆಯುಕ್ತ ರಮೇಶ್, ಮುಡಾ ಸದಸ್ಯರಾದ ಚಂದ್ರಶೇಖರ್, ಮಿನಾಜ್ ಪ್ರವೀಣ್, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಶ್ವೇತಾ ಪ್ರಶಾಂತ್, ಸಬಿತ, ಜುಲೇಕಾಬಿ, ಪ್ರಮುಖರಾದ ಪ್ರಕಾಶ್ ಆಚಾರ್ಯ, ವಿ.ಜಿ.ಮೋಹನ್, ಹರಿಪ್ರಸಾದ್, ಶಶಿಕಲಾ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.