ಮಡಿಕೇರಿ, ಸೆ. ೨೨: ನಿವೇಶನ ರಹಿತರು, ದುರ್ಬಲರಿಗೆ ಮೀಸಲಾಗಿದ್ದ ಬಸವನಹಳ್ಳಿ ಗ್ರಾಮದ ‘ನವ ಗ್ರಾಮ ಯೋಜನೆ'ಯ ಮೀಸಲು ಜಾಗವನ್ನು ಸ್ಥಳೀಯರನ್ನು ಕಡೆಗಣಿಸಿ, ಉಳ್ಳವರಿಗೆ ಮತ್ತು ಇತರೆ ಪ್ರದೇಶದವರಿಗೆ ನೀಡಲಾಗಿದೆ ಎಂದು ಸೋಲಿಗ ಸಮಿತಿಯ ಉಪಾಧ್ಯಕ್ಷ ಮಹೇಶ್ ಬಿ.ಬಿ. ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಹೋಬಳಿ ಬಸವನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದ ೨ ಎಕರೆ ಜಾಗವನ್ನು ನವ ಗ್ರಾಮ ಯೋಜನೆಗೆಂದು ೨೦೧೩ ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದರು. ಈ ಜಾಗವನ್ನು ಗುಡ್ಡೆಹೊಸೂರು ಪಂಚಾಯ್ತಿ ವ್ಯಾಪ್ತಿಯ ಬಡವರು, ನಿರ್ಗತಿಕರು, ವಸತಿ ರಹಿತರಿಗೆ ನಿವೇಶನಗಳನ್ನಾಗಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಪ್ರಸ್ತುತ ಉಳ್ಳವರಿಗೆ ಹಾಗೂ ಇತರೆ ಪ್ರದೇಶದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲ ನಿವೇಶನಗಳಲ್ಲಿ ಎರಡಂತಸ್ತಿನ ಮನೆಗಳ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.
ನವಗ್ರಾಮ ಯೋಜನೆಯಡಿ ನಿವೇಶನಕ್ಕಾಗಿ ಬಸವನಹಳ್ಳಿ ಸುತ್ತಮುತ್ತಲ ನೂರಾರು ಮಂದಿ ನಿವೇಶನ ರಹಿತರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಕೇವಲ ೮ ಮಂದಿಗಷ್ಟೆ ನಿವೇಶನ ನೀಡಲಾಗಿದ್ದು, ಉಳಿದವುಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಾಲೂಕು ತಹಶೀಲ್ದಾರರಿಗೆ ದೂರನ್ನು ನೀಡಲಾಗಿದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಸಿಯೂ ನಿವೇಶನ ಮಂಜೂರಾಗದ ಮಂದಿಗೆ ಪಂಚಾಯ್ತಿ ಕೇವಲ ಸಬೂಬುಗಳನ್ನಷ್ಟೆ ನೀಡುತ್ತಿದೆ ಎಂದು ಆರೋಪಿಸಿದ ಮಹೇಶ್, ವಿಷಯದ ಕುರಿತು ಕೆಲ ದಿನಗಳ ಹಿಂದೆ ನಡೆದ ಗುಡ್ಡೆಹೊಸೂರು ಪಂಚಾಯ್ತಿ ಗ್ರಾಮ ಸಭೆೆಯಲ್ಲೂ ಪ್ರಸ್ತಾಪ ಮಾಡಲಾಗಿದೆ ಎಂದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಸತಿ ರಹಿತರಿಗೆ ಜಿಲ್ಲಾಡಳಿತ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಸವನಹಳ್ಳಿ ಸೋಲಿಗ ಸಮಿತಿಯ ಗೌರವಾಧ್ಯಕ್ಷರಾದ ಪಿ.ಹೆಚ್. ಸಿದ್ದಲಿಂಗ, ದೊಡ್ಡಬೆಟ್ಟಗೇರಿ ಹಾಡಿ ನಿವಾಸಿ ಅನಿತಾ ಬಿ.ಆರ್, ಬಸವನಹಳ್ಳಿ ಹೊಸೂರು ಗ್ರಾಮದ ಎ.ತಾಹೀರ, ಲಕ್ಷಿö್ಮ ಪಿ. ಉಪಸ್ಥಿತರಿದ್ದರು.