ಮಡಿಕೇರಿ, ಸೆ. ೨೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ವಿಶೇಷ ಕಾಳಜಿ ವಹಿಸಿ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ರೂ. ೨.೪೫ ಲಕ್ಷ ಪರಿಹಾರವನ್ನು ಸರ್ಕಾರದಿಂದ ಕೊಡಿಸಿದ್ದಾರೆ.
ಜುಲೈ ೨೯ರಂದು ಸುರಿದ ಭಾರಿ ಮಳೆಗೆ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಸ್ಥಳೀಯ ರೈತರಾದ ನಟರಾಜ್ ಉತ್ತಯ್ಯ ಅವರಿಗೆ ಸೇರಿದ ನಾಲ್ಕು ಹಸುಗಳು ಮತ್ತು ಎರಡು ಹೋರಿಗಳು ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟಿದ್ದವು.
ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ಒದಗಿಸುವಂತೆ ಕೋರಿದ್ದರು. ಕೋರಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದಿಸಿ ಸರಕಾರ ರೂ. ೨.೪೫ ಲಕ್ಷ ಬಿಡುಗಡೆ ಮಾಡಿದೆ.