ಸೋಮವಾರಪೇಟೆ, ಸೆ. ೨೩: ನಂ.೫೧೨ನೇ ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧,೩೯,೯೧,೧೨೦ ರೂ.,ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೨೫ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಹೇಳಿದರು.
ಗೌಡಳ್ಳಿ ಬಿಜಿಎಸ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘದಲ್ಲಿ ೨,೫೭೮ ಸದಸ್ಯರಿದ್ದು, ೨,೮೨,೬೭,೬೯೦ ರೂ.ಗಳಷ್ಟು ಪಾಲು ಬಂಡವಾಳವಿದೆ. ಸಂಚಯ ಠೇವಣಿ, ನಿರಕು ಠೇವಣಿ, ಪಿಗ್ಮಿ ಠೇವಣಿಯಲ್ಲಿ ಒಟ್ಟು ೨೦,೩೪,೭೦,೩೭೭ ರೂ,. ಹಣವನ್ನು ಕ್ರೋಢೀಕರಿಸಲಾಗಿದೆ. ೨೦೨೩-೨೪ ನೇ ಸಾಲಿನಲ್ಲಿ ೨೩,೧೭,೮೧,೦೦೦ ರೂ.ಗಳಷ್ಟು ಕೆಸಿಸಿ ಸಾಲ ವಿತರಿಸಲಾಗಿದ್ದು, ಶೇ.೧೦೦ರಷ್ಟು ಮರುಪಾವತಿಯಾಗಿದೆ. ೧೦೧೫ ಮಂದಿ ಸಾಲ ಪಡೆದುಕೊಂಡಿದ್ದಾರೆ ಎಂದರು.
೫ ಲಕ್ಷ ರೂ.ಗಳ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಮಾತ್ರ ರೈತರಿಗೆ ಉಪಯೋಗವಾಗಲಿದೆ. ಸುಸ್ತಿಯಾದಲ್ಲಿ ಶೇ.೧೦.೫ ರಂತೆ ಬಡ್ಡಿ ಕಟ್ಟಬೇಕು ಎಂದು ಹೇಳಿದರು. ಅಪೆಕ್ಸ್ ಮತ್ತು ಕೆಡಿಸಿಸಿ ಬ್ಯಾಂಕ್ನಿAದ ಉತ್ತಮ ಕಾರ್ಯನಿರ್ವಹಣೆಗಾಗಿ ಸಂಘಕ್ಕೆ ಬಹುಮಾನ ಸಿಗುತ್ತಿದೆ. ಸಂಘದ ನೂತನ ಕಟ್ಟಡ ೧.೦೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಂಘದ ೪ ಎಕರೆ ಜಾಗದಲ್ಲಿ ಕಾಫಿ ತೋಟ ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ೩೨ ಲಕ್ಷ ರೂ.ಗಳಿಗೆ ಸಿಲ್ವರ್ ಮರಗಳನ್ನು ಮಾರಾಟ ಮಾಡಿ, ಹಣವನ್ನು ನೂತನ ಕಟ್ಟಡಕ್ಕೆ ವಿನಿಯೋಗಿಸಲಾಗಿದೆ. ಕಳೆದ ಸಾಲಿನಲ್ಲಿ ಸದಸ್ಯರು ಲಾಭಾಂಶದಲ್ಲಿ ಶೇ೧೦ರಷ್ಟು ಹಣವನ್ನು ಸಂಘದ ಕಟ್ಟಡಕ್ಕೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಅಪರಾಹ್ನ ೩.೩೦ ಗಂಟೆಯ ತನಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಅತೀ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಕೋಟೆಯೂರು ಗ್ರಾಮದ ಜಿ.ಆರ್.ಸಾನಿಕ, ಹಣಕೋಡು ಗ್ರಾಮದ ಎಚ್.ಆರ್. ಬಿಂದು, ನಂದಿಗುAದ ಗ್ರಾಮದ ಎನ್.ಬಿ. ತನ್ವಿನಾ, ಸಿ.ಈ. ಯುವರಾಜ್, ಕೂಗೂರು ಗ್ರಾಮದ ದಿಗಂತ್ಗೌಡ ಪ್ರೋತ್ಸಾಹಧನ ಪಡೆದುಕೊಂಡರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸಿ.ಎ. ಮಮತ, ಸದಸ್ಯರಾದ ಎಸ್.ಬಿ. ಭರತ್ ಕುಮಾರ್, ಎನ್.ಎಸ್. ಪರಮೇಶ್, ವಿ.ಎನ್. ನಾಗರಾಜ್, ಜಿ.ಪಿ. ಸುನಿಲ್ ಕುಮಾರ್, ಕೆ.ಜಿ. ದಿನೇಶ್, ಜಿ.ಈ. ಸುರೇಶ್, ಎಚ್.ಎಸ್. ಪುಷ್ಪ, ಡಿ.ಪಿ. ಸುಮಿತ್ರ, ಟಿ.ಎಸ್. ವಾಣಿ, ಮೇಲ್ವಿಚಾರಕ ಎಲ್.ಕೆ. ರಮೇಶ್, ಸಿ.ಇ.ಒ. ಎಂ.ಎಚ್. ಕಿರಣ್ ಇದ್ದರು.
ಸದಸ್ಯರಿಗೆ ಬಹುಮಾನ: ಮಹಾಸಭೆ ಮುಗಿಯುವ ತನಕ ಕಾರ್ಯ ಕಲಾಪದಲ್ಲಿ ಭಾಗವಹಿಸಿದ್ದ ಅದೃಷ್ಟವಂತ ೧೫ ಮಂದಿ ಸದಸ್ಯರಿಗೆ ತಲಾ ೨ಸಾವಿರ ರೂ.ಗಳ ಬಹುಮಾನ ನೀಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಮಹಾಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸದ ಬಹುತೇಕ ಸದಸ್ಯರು ನಡಾವಳಿ ಪುಸಕ್ತದಲ್ಲಿ ಸಹಿ ಹಾಕಿ, ಹಣ ಪಡೆದು ವಾಪಾಸ್ಸು ತೆರಳುತ್ತಿದ್ದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಕಲಾಪದಲ್ಲಿ ಭಾಗವಹಿಸಿದ್ದ ಸದಸ್ಯರ ಹೆಸರು ಬರೆದು, ಚೀಟಿ ಎತ್ತುವ ಮೂಲಕ ೧೫ ಮಂದಿಯನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಮುಂದಿನ ಮಹಾಸಭೆಯ ಕಲಾಪದಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವಂತೆ ಮಾಡಲು ಇಂತಹ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.