ಮಡಿಕೇರಿ, ಸೆ. ೨೩: ಬಾನಲ್ಲಿ ಮೋಡಗಳು ಮರೆಯಾಗಿ ಕತ್ತಲು ಆವರಿಸಿದರೂ ಬೆಳಕಿನ ಚಿತ್ತಾರದಿಂದ ಝಗಮಗಿಸುತಿದ್ದ ಮಂಜಿನ ನಗರಿ, ತುಂತುರು ಮಳೆ, ಚುಮು ಚುಮು ಚಳಿಯಲ್ಲಿಯೂ ರೋಮಾಂಚನ ಮೂಡಿಸಿದ ಪೌರಾಣಿಕ ಹಿನ್ನೆಲೆಯ ಕಥಾಸಾರಾಂಶ, ನಗರದ ರಾಜಬೀದಿ ಯಲ್ಲಿ ಸಾಗಿದ ಭವ್ಯ ಶೋಭಾಯಾತ್ರೆ ಡಿಜೆ, ಪೂಕೋಡ್ ಬ್ಯಾಂಡ್ ಸೆಟ್‌ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಜನತೆ... ಇದು ಮಡಿಕೇರಿಯ ಅಶೋಕಪುರ ಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿ ವಿಸರ್ಜ ನೋತ್ಸವದಲ್ಲಿ ಕಂಡು ಬಂದ ಚಿತ್ರಣ.

೫೦ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿರುವ ಅಶೋಕಪುರದ ಗಣಪತಿ ಉತ್ಸವ ಸಮಿತಿ ಅಲ್ಲಿನ ಶ್ರೀ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿತು. ಮಂಟಪದಲ್ಲಿ ‘ಗಣಪತಿಯಿಂದ ಶತಮಹಿಷಿಯ ಸಂಹಾರ’ ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು.

ಗಣೇಶ ಸೇರಿದಂತೆ ದೇವಾನು ದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದವು. ರಂಗುರAಗಿನ ಕಾಗದದ ಸ್ಫೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ಮೈನವಿ ರೇಳುವಂತೆ ಮಾಡಿದವು. ಗಜಾನನ ನಿಂದ ಶತಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಸಮಿತಿ ಮನಮೋಹಕವಾಗಿ ಪ್ರಸ್ತುತಪಡಿಸಿತು.

ಅಶೋಕಪುರದಿಂದ ಹೊರಟ ಮಂಟಪ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ಜನರಿಗೆ ಪ್ರದರ್ಶನ ನೀಡಿತು. ಅದ್ದೂರಿಯಾಗಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ನಗರ ಸೇರಿದಂತೆ ವಿವಿಧೆಡೆಗಳಿಂದ ಜನರು ಆಗಮಿಸಿ ಕಟ್ಟಡ, ರಸ್ತೆ ಬದಿಗಳಲ್ಲಿ ನಿಂತು ಮಂಟಪವನ್ನು ವೀಕ್ಷಿಸಿದರು. ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಗರ ಸೇರಿದಂತೆ ಸುತ್ತಮುತ್ತಲಿನ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.