ಗೋಣಿಕೊಪ್ಪಲು, ಸೆ. ೨೧: ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಡಗೂಡಿ ವಿನ್ಯಾಸಗೊಳಿಸಿದ ‘ಕಾಫಿ ಕ್ರಾಪ್ ಕೇರ್’ ಮೊಬೈಲ್ ಅಪ್ಲಿಕೇಷನ್ ಅನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಿದರು.

ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನಲ್ಲಿರುವ ಕೊಡವ ಎಜುಕೇಷನ್ ಸೊಸೈಟಿಯ ಅಧೀನದ ಸಿಐಟಿ ಕಾಲೇಜಿನಲ್ಲಿ ಆವಿಷ್ಕಾರಗೊಂಡ ಮೊಬೈಲ್ ಅಪ್ಲಿಕೇಷನನ್ನು ಸಂಸದ ಯದುವೀರ್ ಬಿಡುಗಡೆಗೊಳಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಆವಿಷ್ಕಾರಗಳು ಹೊರಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಕಾಲೇಜಿನಲ್ಲಿ ಹೊಸ ಅವಿಷ್ಕಾರಕ್ಕೆ ಪೂರಕ ವಾತಾವರಣವಿದ್ದು, ವಿದ್ಯಾರ್ಥಿಗಳು ಶಿಕ್ಷಕರ ಸಹಕಾರ ಪಡೆದು ಅಧ್ಯಯನ ನಡೆಸುವಂತಾಗಬೇಕು.

‘ಕಾಫಿ ಕ್ರಾಪ್ ಕೇರ್’ ಮೊಬೈಲ್ ಅಪ್ಲಿಕೇಷನ್‌ನಿಂದ ಕಾಫಿ ಫಸಲಿನ ಬೆಳವಣಿಗೆ ಸೇರಿದಂತೆ ಕಾಫಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಅವಕಾಶ ಈ ಆವಿಷ್ಕಾರದಿಂದ ದೊರೆತಿದೆ. ಸಿಐಟಿ ಕಾಲೇಜು ಕೊಡಗಿನ ಪ್ರಪ್ರಥಮ ಖಾಸಗಿ ತಾಂತ್ರಿಕ ವಿದ್ಯಾಲಯ

(ಮೊದಲ ಪುಟದಿಂದ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ೨೫ ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳಿಗೆ ಸಿ.ಐ.ಟಿ. ಕಾಲೇಜು ತಾಂತ್ರಿಕ ಶಿಕ್ಷಣ ನೀಡುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿ ಕಾರ್ಯ ನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ತಂತ್ರಜ್ಞಾನವು ಕಾಫಿ ಬೆಳೆಗಾರರಿಗೆ ಕಾಫಿ ಬೆಳೆಯ ಇಳುವರಿ, ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ಅಗತ್ಯ ಮಾಹಿತಿ ನೀಡುವ ವಿಶ್ವಾಸವಿದೆ. ಅಲ್ಲದೆ ರಸಗೊಬ್ಬರ ಬಳಕೆಯ ಸೂಕ್ತ ಕ್ರಮವನ್ನು ತಿಳಿಯಲು ಸಹಾಯಕವಾಗಿದೆ. ಕಾಫಿ ಬೆಳೆಯ ನೈಜ ಮಾರುಕಟ್ಟೆಯ ನಿರ್ದಿಷ್ಟ ಬೆಲೆಯನ್ನು ನಿಖರವಾಗಿ, ಸಮಯಕ್ಕೆ ಅನುಗುಣವಾಗಿ ಕಾಫಿ ಬೆಳೆಗಾರರು ತಿಳಿಸಲು ಸಹಾಯಕವಾಗುವಂತೆ ಈ ಮೊಬೈಲ್ ಅಪ್ಲಿಕೇಷನ್‌ನ್ನು ವಿನ್ಯಾಸಗೊಳಿಸಲಾಗಿದೆ.

ಸಿ.ಐ.ಟಿ. ಕಾಲೇಜಿನ ಈ ಆವಿಷ್ಕಾರದಿಂದ ಕಾಫಿ ಬೆಳೆಗಾರರಿಗೆ ವರದಾನವಾಗಿದೆ. ಅಂಗೈಯಲ್ಲಿಯೇ ಪ್ರಪಂಚದ ಕಾಫಿ ಬೆಳೆಯ ಮಾರುಕಟ್ಟೆಯ ಮೌಲ್ಯವನ್ನು ಕ್ಷಣಾರ್ಧದಲ್ಲಿ ಈ ಮೊಬೈಲ್ ಅಪ್ಲಿಕೇಷನ್ ಮೂಲಕ ಪಡೆಯಬಹುದಾಗಿದೆ. ಕೊಡವ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸಿ.ಐ.ಟಿ. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿ ವೃಂದ ಮತ್ತು ನುರಿತ ಪ್ರಾಧ್ಯಾಪಕ ವೃಂದ ಜಂಟಿಯಾಗಿ ಈ ಯೋಜನೆಯನ್ನು ವಿನ್ಯಾಸ ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಇದರ ಪ್ರಯೋಜನವನ್ನು ಬೆಳೆಗಾರರು, ರೈತರು ಪಡೆದುಕೊಳ್ಳುವಂತೆ ಸಂಸದ ಯದುವೀರ್ ಕರೆ ನೀಡಿದರು.

ಸಿಐಟಿಯ ಕೊಡವ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿ.ಐ.ಟಿ. ಕಾಲೇಜು ಶೈಕ್ಷಣಿಕ ಮತ್ತು ತಾಂತ್ರಿಕ ಕ್ಷೇತ್ರದ ಅಭೂತಪೂರ್ವ ಸಾಧನೆಯ ಜೊತೆಗೆ ಕೃಷಿಕರಿಗೆ ನೆರವಾಗಲು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಮಹತ್ವದ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕೊಡಗಿನ ಕಾಫಿ ಬೆಳೆಗಾರರು ಈ ಮೊಬೈಲ್ ಅಪ್ಲಿಕೇಷನ್ ಮೂಲಕ ಕಾಫಿ ವಾಣಿಜ್ಯ ಉದ್ಯಮದಲ್ಲಿ ಮತ್ತು ವ್ಯವಹಾರದಲ್ಲಿ ಹಲವಾರು ರೀತಿಯ ಪ್ರಯೋಜನವನ್ನು ಮತ್ತು ಬೆಳೆಯ ಕುರಿತ ಸೂಕ್ತ ಅರಿವನ್ನು ಪಡೆಯಬಹುದಾಗಿದೆ. ಈ ಕಾಫಿ ಕ್ರಾಪ್ ಕೇರ್ ಅಪ್ಲಿಕೇಷನ್ ಕೊಡಗಿನ ರೈತರಿಗೆ ಕಾಫಿ ಬೆಳೆಯಲ್ಲಿ ಲಾಭಗಳಿಸಲು ಪ್ರಯೋಜನಕಾರಿ ಯಾಗಿದೆ ಎಂದರು.

ಬೆAಗಳೂರಿನ ಕೊಕ್ಕೇನ್ ರೊಬಿಟಿಕ್ಸ್ ಸ್ಥಾಪಕ ಹಾಗೂ ಸಿಇಒ ಕೊಕ್ಕೇಂಗಡ ದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ ‘ಕಾಫಿ ಕ್ರಾಪ್ ಕೇರ್’ ಮೊಬೈಲ್ ಅಪ್ಲಿಕೇಷನ್‌ನ ಸಮಗ್ರ ಮಾಹಿತಿಯನ್ನು ಒದಗಿಸಿದರು. ವೇದಿಕೆಯಲ್ಲಿ ಸಿಐಟಿಯ ಕೊಡವ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಸಿ.ಪಿ. ರಾಕೇಶ್ ಪೂವಯ್ಯ, ಉಪಾಧ್ಯಕ್ಷ ಕೆ.ಎ. ಚಿಣ್ಣಪ್ಪ, ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಬಸವರಾಜು, ಸಮನ್ವಯಾಧಿಕಾರಿ ಡಾ.ಬಿ.ಬಿ. ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಸರ್ಗ ಬಿ. ಹೂಗಾರ್ ಪ್ರಾರ್ಥಿಸಿ, ಲಿಯಾ ಸ್ವಾಗತಿಸಿ, ಬಾನುತೇಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾಥಿಗಳು ಭಾಗವಹಿದ್ದರು.

-ಹೆಚ್.ಕೆ. ಜಗದೀಶ್