ಐಗೂರು, ಸೆ. ೨೦: ಕಳೆದ ಮೂರು ವರ್ಷಗಳ ಹಿಂದೆ ಕುಸಿದು ಹೋದ ರಸ್ತೆ ಮತ್ತು ಕಿರುಸೇತುವೆಯನ್ನು ನಿರ್ಮಿಸದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಿದ್ದು, ಕಾವೇರಿ ನೀರಾವರಿ ನಿಗಮ, ಮತ್ತು ಸರ್ಕಾರಕ್ಕೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದರೂ ಗ್ರಾಮಸ್ಥರ ಮನವಿಗೆ ಬೆಲೆ ಸಿಗದ ಕಾರಣ ಗ್ರಾಮಸ್ಥರು ಸ್ವಂತ ಹಣದಿಂದ ಅಡಕೆ ಮರದ ದಿಮ್ಮಿಗಳನ್ನು ಜೋಡಿಸಿ ನೂತನ ಸೇತುವೆಯನ್ನು ನಿರ್ಮಿಸಿದ್ದಾರೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡಿನಲ್ಲಿ ಇದು ಉದ್ಘಾಟನೆಗೊಂಡಿದೆ. ೨೦೨೧ರ ಮಳೆಗಾಲದಲ್ಲಿ ಬೇಳೂರು ಪಂಚಾಯಿತಿಯ ಕಾರೆಕೊಪ್ಪ ಭಾಗದಿಂದ ರಭಸವಾಗಿ ಹರಿದು ಬಂದ ನೀರಿನಿಂದ ಯಡವನಾಡಿನಿಂದ ಹಾರಂಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಕಿರುಸೇತುವೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ರಸ್ತೆಯು ಯಡವನಾಡು ಭಾಗದ ವಾಹನ ಸವಾರರು ಮತ್ತು ಜನರಿಗೆ ಅನುಕೂಲಕರವಾಗಿತ್ತು.
ಈ ಭಾಗದಲ್ಲಿ ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿದ್ದು ವೃದ್ಧರು, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಬದಲಿ ಮಾರ್ಗದಲ್ಲಿ ಹೆಚ್ಚಿಗೆ ೫ ಕಿಲೋಮಿಟರ್ ದೂರ ಬಳಸಿಕೊಂಡು ಹಾರಂಗಿಯನ್ನು ತಲುಪಬೇಕಾಗಿತ್ತು. ಜೊತೆಗೆ ವರ್ಷವಿಡೀ ಕಾಡಾನೆಗಳ ಕಾಟದಿಂದ ಇವರ ಬದುಕು ದುಸ್ತರವಾಗಿತ್ತು. ಕಳೆದ ಮೂರು ವರ್ಷದಿಂದಲೂ ಕುಸಿದು ಹೋಗಿದ್ದ ಕಿರು ಸೇತುವೆಯ ಬದಲಿಗೆ ಹೊಸ ಕಿರು ಸೇತುವೆ ನಿರ್ಮಿಸದ ಬಗ್ಗೆ ಬಸವಳಿದ ಗ್ರಾಮಸ್ಥರು ಕೊನೆಗೆ ಒಮ್ಮತದ ನಿರ್ಣಯಕ್ಕೆ ಬಂದು, ೫,೦೦೦ ರೂಪಾಯಿವರೆಗಿನ ಸ್ವಂತ ಖರ್ಚಿನಿಂದ ಅಡಕೆ ಮರದ ದಿಮ್ಮಿ ಗಳಿಂದ ಕಿರು ಸೇತುವೆಯನ್ನು ನಿರ್ಮಿಸಿ ಜನ ಸಂಚಾರ ಮತ್ತು ದ್ವಿಚಕ್ರವಾಹನ ಸವಾರರಿಗೆ ಅನುವು ಮಾಡಿಕೊಟ್ಟಿದ್ದಾರೆ.
ಆದರೆ ಈಗಲೂ ವಾಹನ ಸಂಚಾರಕ್ಕೆ ಹೆಚ್ಚಿಗೆ ಐದು ಕಿಲೋಮೀಟರ್ ಬಳಸಿಕೊಂಡೇ ಹಾರಂಗಿಯನ್ನು ತಲುಪಬೇಕಾಗಿದೆ. ಕಳೆದ ಸಾಲಿನಲ್ಲಿ ಯಡವನಾಡಿನ ಸಮುದಾಯ ಭವನದಲ್ಲಿ ನಡೆದ ಐಗೂರು ಗ್ರಾಂ. ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.
-ಸುಕುಮಾರ