ಮಡಿಕೇರಿ, ಸೆ. ೨೦: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ತಾಲೂಕಿನ ವಿವಿಧೆಡೆಗಳಿಂದ ಕ್ರೀಡಾಪಟುಗಳು ಆಟೋಟಗಳಲ್ಲಿ ಸ್ಪರ್ಧಿಸಿ ಪಂದ್ಯಾಟಕ್ಕೆ ಕಳೆ ತಂದರು. ಕೊಡಗು ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ದಸರಾ ಅಂಗವಾಗಿ ಜಿಲ್ಲೆಯ ೫ ತಾಲೂಕುಗಳಲ್ಲಿ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆ ಮಡಿಕೇರಿ ತಾಲೂಕು

(ಮೊದಲ ಪುಟದಿಂದ) ಮಟ್ಟದ ಕ್ರೀಡಾಕೂಟವನ್ನು ನಗರದಲ್ಲಿ ಆಯೋಜಿಸಲಾಗಿತ್ತು. ಪುರುಷರ ಹಾಗೂ ಮಹಿಳಾ ವಿಭಾಗಕ್ಕಾಗಿ ವಿವಿಧ ಹಂತದ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಭಾರದ ಗುಂಡು, ಜಾವೆಲಿನ್, ಡಿಸ್ಕಸ್ ಎಸೆತ, ಟ್ರಿಪಲ್ ಜಂಪ್, ೧೧೦ ಮೀಟರ್ ಹರ್ಡಲ್ಸ್, ರಿಲೇ ಓಟ, ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿಗಳು ನಡೆದವು. ವಿವಿಧ ತಂಡಗಳು ಗುಂಪು ಆಟೋಟಗಳಲ್ಲಿ ಭಾಗವಹಿಸಿದ್ದವು. ವಿವಿಧ ವಿಭಾಗದ ಓಟದಲ್ಲಿ ಎಲ್ಲಾ ವಯೋಮಾನದವರು ಪಾಲ್ಗೊಂಡು ಸೈ ಎನಿಸಿಕೊಂಡರು. ತಾಲೂಕು ಮಟ್ಟದಲ್ಲಿ ಜಯ ಸಾಧಿಸುವವರು ತಾ. ೨೬ ರಂದು ಕೂಡಿಗೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಅರ್ಹತೆ ಗಳಿಸಿಕೊಳ್ಳಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಬಾಸ್ಕೆಟ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ ಸ್ಪರ್ಧೆಗಳು ಹೆಚ್ಚುವರಿಯಾಗಿ ನಡೆಯಲಿವೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ವಿಸ್ಮಯಿ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸುವವರು ವಿಭಾಗೀಯ ಮಟ್ಟಕ್ಕೆ ಪ್ರವೇಶಿಸಿ ಅಲ್ಲಿ ಗೆದ್ದರೆ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹರಾಗುತ್ತಾರೆ ಎಂದು ವಿವರಿಸಿದರು.