ಐಗೂರು, ಸೆ. ೨೦: ಐಗೂರಿನ ವಿಜಯನಗರದ ಗುಳಿಗಪ್ಪ ಸಮುದಾಯ ಭವನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಶಾಸಕರನ್ನು ಗುಳಿಗಪ್ಪ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರ ಗೆಲುವಿಗಾಗಿ ವಿಜಯನಗರದ ಪಕ್ಷದ ಕಾರ್ಯಕರ್ತ ಕುಮಾರ ಎಂಬುವವರು ಗುಳಿಗಪ್ಪ ದೇವರಲ್ಲಿ ಹರಕೆ ಮಾಡಿದ್ದರು. ಹರಕೆಯ ಪ್ರಯುಕ್ತ ೧೦೧ ತೆಂಗಿನ ಕಾಯಿಗಳನ್ನು ಶಾಸಕರ ಸಮ್ಮುಖದಲ್ಲಿ ಗುಳಿಗಪ್ಪ ದೇವಾಲಯದಲ್ಲಿ ಒಡೆಯಲಾಯಿತು. ಈ ಸಂದರ್ಭದಲ್ಲಿ ಗುಳಿಗಪ್ಪ ದೇವಾಲಯದ ಸಮುದಾಯ ಭವನದ ಸ್ಥಳಕ್ಕೆ ಹಕ್ಕುಪತ್ರ ಕೊಡಿಸುವ ಬಗ್ಗೆ ಮತ್ತು ಮಂಟಪದ ಕಾಮಗಾರಿ ಕೆಲಸಕ್ಕೆ ಸಹಾಯಧನ ಕೋರಿ ಗುಳಿಗಪ್ಪ ಸೇವಾ ಸಮಿತಿ ವತಿಯಿಂದ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಶಾಸಕರು ಸಮುದಾಯ ಭವನದ ಉಳಿದ ಕಾಮಗಾರಿ ಕೆಲಸಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಎಸ್.ಎಂ. ಚಂಗಪ್ಪ, ಬಿ.ಬಿ. ಸತೀಶ್, ಸಬಿತಾ ಚೆನ್ನಕೇಶವ, ದಿನೇಶ್, ಹೊನ್ನಪ್ಪ, ಕುಮಾರ, ಗುಳಿಗಪ್ಪ ಸೇವಾ ಸಮಿತಿಯ ಅಧ್ಯಕ್ಷ ರವಿ, ಕಾರ್ಯದರ್ಶಿ ರಮೇಶ್, ಧರ್ಮಪ್ಪ, ಡೇವಿಡ್, ಅಚ್ಚುತ ಮತ್ತು ಗಜಾನನ ಯುವಕ ಸಂಘದ ಸದಸ್ಯರು ಭಾಗವಹಿಸಿದ್ದರು.