ಗೋಣಿಕೊಪ್ಪಲು, ಸೆ. ೨೦: ಕೊಡಗಿನ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಆಗಮಿಸುತ್ತಿದ್ದ ಅಸ್ಸಾಂ ರಾಜ್ಯದ ಕಾರ್ಮಿಕರು ತೋಟದ ಮಾಲೀಕರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದೀಗ ಹಲವು ಅಸ್ಸಾಂ ಕಾರ್ಮಿಕರ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತುರ್ತು ಸಭೆ ನಡೆಸುವ ಮೂಲಕ ತಮ್ಮ ವ್ಯಾಪ್ತಿಯಲ್ಲಿರುವ ಅಸ್ಸಾಂ ಕಾರ್ಮಿಕರ ದಾಖಲೆ ಸಂಗ್ರಹಿಸಲು ನಿರ್ಧಾರ ಕೈಗೊಂಡಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಮಿಕರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ದಿನೇಶ್ (ಕುಶ), ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಹಾಗೂ ಇತರ ಸದಸ್ಯರು ವಿಶೇಷ ಆಸಕ್ತಿ ವಹಿಸುವ ಮೂಲಕ ತಮ್ಮ ವ್ಯಾಪ್ತಿಯ ಬೆಳೆಗಾರರು, ರೈತರು, ಮಾಜಿ ಸೈನಿಕರ ವಿಶ್ವಾಸ ಪಡೆಯುವುದರೊಂದಿಗೆ ತಮ್ಮ ವ್ಯಾಪ್ತಿಯಲ್ಲಿರುವ ೩೯೦ಕ್ಕೂ ಆಧಿಕ ಅಸ್ಸಾಂ ಕಾರ್ಮಿಕರ ದಾಖಲೆ ಸಂಗ್ರಹಿಸುವಲ್ಲಿ ಆರಂಭದಲ್ಲಿಯೇ ಯಶಸ್ವಿಯಾಗಿದ್ದಾರೆ.
ಕಾರ್ಮಿಕರ, ಮಾಲೀಕರ ರೈತರ ಮೊಬೈಲ್ ನಂಬರನ್ನು ಸಂಗ್ರಹಿಸುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ವಾಟ್ಸಾö್ಯಪ್ ಗ್ರೂಪ್ ಆರಂಭಿಸಿರುವ ಪಂಚಾಯಿತಿ ತಮ್ಮ ಭಾಗದಲ್ಲಿ ಕಾರ್ಮಿಕರ ದೈನಂದಿನ ಚಟುವಟಿಕೆಗಳನ್ನು ಗಮನಿಸುವ ಸಲುವಾಗಿ ಜಿಲ್ಲೆಯಲ್ಲಿಯೆ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗಿದೆ.
ಪಂಚಾಯಿತಿ ಆವರಣದಲ್ಲಿ ದಾಖಲೆ ಸಂಗ್ರಹ ಅಭಿಯಾನ ಕೈಗೊಂಡ ಪಂಚಾಯಿತಿ ತೋಟದಲ್ಲಿರುವ
(ಮೊದಲ ಪುಟದಿಂದ) ಕಾರ್ಮಿಕರ ಸಮಗ್ರ ಮಾಹಿತಿಯೊಂದಿಗೆ ತೋಟದ ಮಾಲೀಕರ ವಿವರವನ್ನು ಪಡೆಯುವ ಮೂಲಕ ದಾಖಲೆಗಳನ್ನು ಸಂಗ್ರಹಿಸಲಾಯಿತು. ದಾಖಲೆ ಸಂಗ್ರಹ ಸಂದರ್ಭ ಪೊಲೀಸ್ ಅಧಿಕಾರಿಗಳು ಅಸ್ಸಾಂ ಕಾರ್ಮಿಕರ ಆಧಾರ್ ಕಾರ್ಡ್ಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ನಕಲಿ ಕಾರ್ಡ್ಗಳನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದರು.
ಬಾಡಿಗೆ ಮನೆಯಲ್ಲಿ ವಾಸವಿರುವ ಹಲವು ಕುಟುಂಬಗಳು ಇನ್ನೂ ಕೂಡ ದಾಖಲಾತಿ ನೀಡಿಲ್ಲದ ಕಾರಣ ಪೊಲೀಸರು ಈ ಬಗ್ಗೆ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮುಂಜಾನೆಯಿAದಲೇ ತೋಟದ ಮಾಲೀಕರು ತಮ್ಮಲ್ಲಿರುವ ಕಾರ್ಮಿಕರನ್ನು ಪಂಚಾಯಿತಿಗೆ ಕರೆ ತರುವ ಮೂಲಕ ವಿವರಗಳನ್ನು ಪೊಲೀಸರಿಗೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಇಂತಹ ನಿರ್ಧಾರಗಳನ್ನು ಗ್ರಾ.ಪಂ. ತೆಗೆದುಕೊಂಡಿದೆ. ಗ್ರಾಮ ಪಂಚಾಯಿತಿಯ ಉತ್ತಮ ಕೆಲಸಕ್ಕೆ ಸ್ಥಳೀಯ ಬೆಳೆಗಾರರು, ರೈತರು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ತಮ್ಮಲ್ಲಿರುವ ಕಾರ್ಮಿಕರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.
ಕೊಡಗಿನಲ್ಲಿ ಇತ್ತೀಚೆಗೆ ಅಸ್ಸಾಂ ಕಾರ್ಮಿಕರಿಂದ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹಾಲುಗುಂದ ಗ್ರಾ.ಪಂ. ದಾಖಲೆ ಸಂಗ್ರಹಿಸಿ ಕಾರ್ಮಿಕರಿಗೆ ಅತ್ಯಂತ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ, ಯಾವುದೇ ದಾಖಲೆ ಇಲ್ಲದ ಕಾರ್ಮಿಕರನ್ನು ತಮ್ಮ ತೋಟಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅತ್ಯಂತ ಎಚ್ಚರಿಕೆ ವಹಿಸಲು ಗ್ರಾ.ಪಂ. ಅಧ್ಯಕ್ಷ ಪಂದಿಕAಡ ದಿನೇಶ್ ಸಭೆಯಲ್ಲಿ ನೆರೆದಿದ್ದ ಕಾರ್ಮಿಕರಿಗೆ ಹಾಗೂ ಬೆಳೆಗಾರರಿಗೆ ಕರೆ ನೀಡಿದರು.
ತಮ್ಮ ತೋಟದ ಲೈನ್ ಮನೆಗಳಿಗೆ ಹೊಸ ಕಾರ್ಮಿಕರು ಆಗಮಿಸಿದ ವೇಳೆ ಕೂಡಲೇ ಸಂಬAಧಿಸಿದ ಮಾಲೀಕರಿಗೆ ತಿಳಿಸುವಂತೆಯೂ, ಕೂಲಿ ವಿಚಾರದಲ್ಲಿ ಮಾಲೀಕರೊಂದಿಗೆ ವಾಗ್ವಾದಕ್ಕಿಳಿಯದೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಈ ಸಂದÀರ್ಭ ತಿಳಿ ಹೇಳಿದರು.
ಕೊಡಗಿನಲ್ಲಿ ಮೊದಲ ಪ್ರಯತ್ನವಾಗಿ ಅಸ್ಸಾಂ ಕಾರ್ಮಿಕರ, ತೋಟ ಮಾಲೀಕರ, ರೈತರನ್ನೊಳಗೊಂಡ ವಾಟ್ಸಾö್ಯಪ್ ಗ್ರೂಪನ್ನು ಆರಂಭಿಸಿರುವ ಗ್ರಾಮ ಪಂಚಾಯಿತಿಯು ಗ್ರೂಪಿನಲ್ಲಿ ಸಂಬAಧಿಸಿದ ಪೊಲೀಸ್ ಅಧಿಕಾರಿಗಳನ್ನು ಸೇರಿಸಲಾಗಿದೆ. ಗ್ರೂಪಿನಲ್ಲಿ ಕಾರ್ಮಿಕರ ದೈನಂದಿನ ಚಟುವಟಿಕೆಗಳನ್ನು ಗಮನಿಸಲಾಗುವುದು. ತೋಟದ ಮಾಲೀಕರು ಕಾರ್ಮಿಕರ ಬಗ್ಗೆ ಯಾವುದೇ ವಿಚಾರಗಳಿದ್ದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ತೋಟಕ್ಕೆ ಬರುವ ಕಾರ್ಮಿಕರ ವಿವರಗಳನ್ನು ಆಗಿಂದ್ದಾಗಿಯೇ ಅಪ್ಡೆಟ್ ಮಾಡಲು ತಿಳಿಸಲಾಗಿದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗೊತ್ತಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ತೋಟದ ಮಾಲೀಕರು ಬರುವುದನ್ನು ಕಡಿಮೆ ಮಾಡುವ ಸಲುವಾಗಿ ಈ ರೀತಿಯ ವ್ಯವಸ್ಥೆ ಮಾಡಿರುವುದಾಗಿ ಅಧ್ಯಕ್ಷ ದಿನೇಶ್ ತಿಳಿಸಿದರು.
ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ವಿಶೇಷ ಆಸಕ್ತಿ ವಹಿಸಿ ಮಾಡಲಾಗಿದೆ. ಗ್ರಾಮದ ರೈತರು ಬೆಳೆಗಾರರು ನಿರಂತರವಾಗಿ ಪಂಚಾಯಿತಿಯೊAದಿಗೆ ಸಂಪರ್ಕದಲ್ಲಿರುವAತೆ ಮನವಿ ಮಾಡಿದರು.
ದಾಖಲೆ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಮೇಕೇರಿರ ಜಯರಾಮ್, ಪೊಟ್ಟಂಡ ನಾಣಯ್ಯ, ಪೊಟ್ಟಂಡ ಸುಬ್ಬಯ್ಯ, ಪೊಟ್ಟಂಡ ಜೀವನ್, ಪಂದಿಕAಡ ಚಂಗಪ್ಪ, ಮಾಚಯ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಉಜ್ಮಾ ಸಭಿನ್ ಸೇರಿದಂತೆ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು, ಸಿದ್ದಾಪುರ ಎಸ್ಐ ರಾಘವೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.