ಮಡಿಕೇರಿ, ಸೆ. ೨೦: ಶಾಂತಿನಿಕೇತನ ಯುವಕ ಸಂಘದ ೪೬ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಉತ್ಸವ ಮೂರ್ತಿಯ ವಿಸರ್ಜನೆ ತಾ. ೨೧ರಂದು (ಇಂದು) ನಡೆಯಲಿದೆ. ಈ ಬಾರಿ ಗಣೇಶ ಪುರಾಣದ ಆರನೇ ಸಂಪುಟದ ೭೯ನೇ ಅಧ್ಯಾಯ ದಿಂದ ಆಯ್ದ, "ಮಯೂರೇಶ ನಿಂದ ಸಿಂಧೂ ದೈತ್ಯನ ವಧೆ" ಎಂಬ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ.
ಹಿಂದೆ ಗಂಡಕಿ ರಾಜ್ಯವನ್ನು ಧರ್ಮಿಷ್ಠನಾದ ರಾಜ ಚಕ್ರಪಾಣಿಯು ಆಳುತ್ತಿದ್ದನು. ಶೌನಕ ಮುನಿಯ ಮಾರ್ಗ ದರ್ಶನದಂತೆ ಆತ ವಂಶೋದ್ಧಾರಕ ಪುತ್ರನಿಗಾಗಿ ಸೂರ್ಯದೇವನಿಂದ ಅನುಗ್ರಹೀತನಾಗುತ್ತಾನೆ. ರಾಣಿ ಉಗ್ರೆಯು ಗರ್ಭದ ತಾಪವನ್ನು ತಡೆಯಲಾರದೆ, ಸಮುದ್ರ ತೀರದಲ್ಲಿ ಬಲವಂತವಾಗಿ ಸೂರ್ಯಾನುಗ್ರಹ ದಿಂದ ಪಡೆದ ಗರ್ಭವನ್ನು ತೊರೆಯುತ್ತಾಳೆ. ಅದರಿಂದ ಜನಿಸಿದ ಸಿಂಧೂ ಎಂಬ ದೈತ್ಯನು ಸೂರ್ಯದೇವನನ್ನು ಒಲಿಸಿ ಅಗಣಿತ ವರ ಪಡೆಯುತ್ತಾನೆ.
ಲೋಕಕಂಟಕನಾದ ಸಿಂಧೂ ದೈತ್ಯನನ್ನು ಗಣಪತಿಯು ಮಯೂರೇಶನಾಗಿ ವಧಿಸುವ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಲಾಗುವುದು.
ಕಥಾ ಸಾರಾಂಶವನ್ನು ಆರ್ ಬಿ ರವಿ, ಕಥಾ ಸಂಕಲನವನ್ನು ಸಂತೋಷ್ ಮಾಡಿರುತ್ತಾರೆ. ಮೂರ್ತಿ ಹಾಗೂ ಸೆಟ್ ವರ್ಕ್ಸ್ಅನ್ನು ಸಂಘದ ಸದಸ್ಯರು ಆಗಿರುವ ಕಲಾವಿದ ರವಿ ಮತ್ತು ತಂಡ, ಚಲನವಲನಗಳನ್ನು ಸಂಘದ ಸದಸ್ಯರುಗಳಾದ ವಿಜಯ್, ಅರುಣ್ ವಿನು ಮತ್ತು ತಂಡ ,ಹಾಗೂ ಆಕರ್ಷಕ ಕೂಲ್ ಫೈರ್ ಹಾಗೂ ವಿನೂತನ ಸ್ಟುಡಿಯೋ ಸೆಟ್ಟಿಂಗ್ ಅನ್ನು ಬೆಂಗಳೂರಿನ ಆರ್ ಜೆ ಇವೆಂಟ್ಸ್ ಮಾಡಲಿದ್ದು, ಶೋಭಾ ಯಾತ್ರೆಯ ಧ್ವನಿವರ್ಧಕವನ್ನು ಗುರು ಲೈಟಿಂಗ್ಸ್ ಹಾಗೂ ಕ್ಯಾಲಿಕೆಟ್ ವಾದ್ಯ ತಂಡವು ಮುನ್ನಡೆಸಲಿದೆ.
ಸಂಜೆ ೬ ಗಂಟೆಗೆ ಶೋಭಾಯಾತ್ರೆ ಹೊರಡಲಿದ್ದು, ಶಾಂತಿನಿಕೇತನ ಬಳಿ, ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ, ಚಿಕ್ಕಪೇಟೆ, ಹಳೆ ಖಾಸಗಿ ಬಸ್ ನಿಲ್ದಾಣ, ಚೌಕಿ ಹಾಗೂ ಚೌಡೇಶ್ವರಿ ದೇವಾಲಯದ ಬಳಿ ಚಲನವಲನದ ಪ್ರದರ್ಶನ ನಡೆಯಲಿದೆ. ನಂತರ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಚೇತನ್ ತಿಳಿಸಿದ್ದಾರೆ.