ವೀರಾಜಪೇಟೆ, ಸೆ. ೧೮: ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ವೀರಾಜಪೇಟೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಹೆಗ್ಗಳ ನಿರ್ಮಲಗಿರಿ ಸ್ನೇಹ ಭವನದಲ್ಲಿದ್ದ ವೃದ್ಧರು ಮತ್ತು ಎಸ್.ಹೆಚ್. ಕಾನ್ವೆಂಟ್ನ ವೃದ್ದಾಶ್ರಮದ ವೃದ್ಧರಿಗೆ ಓಣಂ ಸದ್ಯ (ವಿಶೇಷ ಭೋಜನ) ಮತ್ತು ಮಹಿಳಾ ಘಟಕದ ವತಿಯಿಂದ ಓಣಂ ಕೊಡಿ (ಹೊಸ ಧಿರಿಸು) ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು, ಸಂಸ್ಥೆಯು ೧೬ನೇ ವರ್ಷದ ಓಣಂ ಹಬ್ಬದ ಆಚರಣೆಯ ಅಂಗವಾಗಿ ವೃದ್ಧಾಶ್ರಮದಲ್ಲಿ ವಾಸ ಮಾಡುವ ವೃದ್ಧರಿಗಾಗಿ ಓಣಂ ಸದ್ಯವನ್ನು ಹಮ್ಮಿಕೊಂಡಿದೆ. ಇದಲ್ಲದೆ ಸುಮಾರು ೫೦ ಮಂದಿಗೆ ಆಹಾರ ಪದಾರ್ಥಗಳನ್ನು ಒಂದೆಡೆಯಿAದ ಮತ್ತೊಂದೆಡೆಗೆ ಸಾಗಿಸಲು ಸುಗಮವಾಗಲೆಂದು ಸುಮಾರು ರೂ. ೧೫,೦೦೦ ವೆಚ್ಚದಲ್ಲಿ ಊಟದ ಡಬ್ಬಿ (ಟಿಫಿನ್ ಕ್ಯಾರಿಯರ್) ವೃದ್ಧಾಶ್ರಮಕ್ಕೆ ಉಚಿತವಾಗಿ ನೀಡುತ್ತಿದ್ದೇವೆ ಎಂದರು.
ಹೆಗ್ಗಳ ಎಸ್.ಹೆಚ್. ಧರ್ಮ ಕೇಂದ್ರದ ಧರ್ಮಗುರುಗಳಾದ ರೆ.ಫಾ. ಜೋಸೆಫ್ ಪುದುಚೇರಿ ಅವರು ಮಹಿಳಾ ವೃದ್ಧರಿಗೆ ಹೊಸ ಧಿರಿಸು ವಿತರಿಸಿ ಮಾತನಾಡಿ, ಹಬ್ಬಗಳ ಆಚರಣೆಗಳು ಮನೆ, ಕುಟುಂಬಕ್ಕೆ ಮಾತ್ರ ಸಿಮಿತವಾಗದೇ ಸಮಾಜಕ್ಕೆ ಒಳಿತು ಮಾಡುವ ರೀತಿಯಲ್ಲಿ ಆಚರಣೆಯಾಗಬೇಕು ಈ ನಿಟ್ಟಿನಲ್ಲಿ ಮಲಯಾಳಿ ಸಮಾಜವು ಓಣಂ ಹಬ್ಬದ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆ ಮಾಡಿದೆ. ಅಲ್ಲದೆ ವೃದ್ಧಾಶ್ರಮಕ್ಕೆ ನಿರಂತರವಾಗಿ ವಿವಿಧ ರೀತಿಯಲ್ಲಿ ತನ್ನ ಸಮಾಜಿಕ ಕಳಕಳಿಯನ್ನು ಮುಂದುವರೆಸಿದೆ. ಮಲಯಾಳಿ ಸಮಾಜದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಸದಸ್ಯರು ಹಾಗೂ ಸ್ನೇಹ ಭವನ್ ವೃದ್ಧಾಶ್ರಮದ ವ್ಯವಸ್ಥಾಪಕರು, ಎಸ್.ಹೆಚ್. ಕಾನ್ವೆಂಟ್ನ ಸಿಬ್ಬಂದಿ ಹಾಜರಿದ್ದರು.