ವೀರಾಜಪೇಟೆ, ಸೆ. ೧೮: ವೀರಾಜಪೇಟೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ಪ್ರಾಯೋಜಕತ್ವದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗದ ವತಿಯಿಂದ "ಗಣೇಶೋತ್ಸವ ಬಹುಭಾಷಾ ಕವಿಗೋಷ್ಠಿ"ಯನ್ನು ನಡೆಸಲಾಯಿತು. ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಯಶೋಧ. ಹೆಚ್.ಜಿ. ಅಧ್ಯಕ್ಷತೆಯಲ್ಲಿ ನಂಬುಡುಮಾಡ ಆನಂದ್ ರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಅತಿಥಿಯಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕವಿಮನಸ್ಸಿಗೆ ಯಾವುದೇ ಭಾಷೆಯ ಬೇಧ ಭಾವ ಇರುವುದಿಲ್ಲ. ಭಾಷೆಗೆ ಮೀರಿದ್ದು ಕವಿಯ ಭಾವನೆ. ಭಾವನೆಗಳು ಮತ್ತು ಭಾವನಾತ್ಮಕ ಸಂಬAಧಗಳೇ ಸಾಹಿತ್ಯದ ಏಳಿಗೆಗೆ ಮೂಲ ಎಂದರು. ಇನ್ನೋರ್ವ ಅತಿಥಿ ಕೊಡವಾಮೆರ ಕೊಂಡಾಟ ಬಳಗದ ಚಾಮೆರ ದಿನೇಶ್ ಮತ್ತು ನಾರಾಯಣ ಕುಂಬ್ರ ಮಾತನಾಡಿದರು.
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗದ ಸಂಸ್ಥಾಪಕ ವೈಲೇಶ್ ಪಿ.ಎಸ್. ಪ್ರಾಸ್ತಾವಿಕ ನುಡಿಯಾಡಿದರು. ೨೮ ಕವಿ-ಕವಯತ್ರಿಯರು ಕನ್ನಡ, ಕೊಡವ, ಇಂಗ್ಲೀಷ್, ತುಳು, ಹಿಂದಿ ಭಾಷೆಯಲ್ಲಿ ಕವನ ವಾಚನ ಮಾಡಿದರು. ವಿದ್ಯಾ ಜಗದೀಶ್ ಪುತ್ತಾಮನೆ ಪ್ರಾರ್ಥಿಸಿ, ಸುಪ್ರೀತ ದಿಲೀಪ್ ಸ್ವಾಗತಿಸಿ, ವಿಮಲ ದಶರಥ್ ನಿರೂಪಿಸಿ, ಪುಷ್ಪಲತಾ ಶಿವಪ್ಪ ವಂದಿಸಿದರು.