ಪೊನ್ನಂಪೇಟೆ, ಸೆ. ೧೬: ಪೊನ್ನಂಪೇಟೆ ಪಟ್ಟಣದಲ್ಲಿ ವಿಜೃಂಭಣೆಯಿAದ ನಡೆದ ಗೌರಿ ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಡಿಜೆ, ವಾಲಗ, ಬ್ಯಾಂಡ್ ಸೆಟ್ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಪೊನ್ನAಪೇಟೆ ವ್ಯಾಪ್ತಿಯ ವಿವಿಧ ೭ ಗೌರಿ ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ವಾಹನಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನ ಸಾಗರದ ನಡುವೆ ಮೆರವಣಿಗೆ ನಡೆಸಿ ಬೆಳಗ್ಗಿನ ಜಾವ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ತೆರೆ ಎಳೆಯಲಾಯಿತು.

ಸಂಜೆ ೬ ಗಂಟೆಯಿAದಲೇ ತಮ್ಮ ತಮ್ಮ ಬಡಾವಣೆಯಿಂದ ಡಿಜೆ, ಬ್ಯಾಂಡ್ ಸೆಟ್, ವಾಲಗ ನಾದಕ್ಕೆ ಹೆಜ್ಜೆ ಹಾಕುತ್ತ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ಬಸವೇಶ್ವರ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೌರಿ ಕೆರೆಗೆ ತೆರಳಿ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.

ಗಮನ ಸೆಳೆದ ಶೋಭಾಯಾತ್ರೆ

ಕೃಷ್ಣ ನಗರದ ಕೃಷ್ಣ ಯುವಕರ ಸಂಘದ ವತಿಯಿಂದ ೩೨ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರದರ್ಶನಗೊಂಡ ಧಾರ್ಮಿಕ ಹಿನ್ನೆಲೆಯ ಕಥಾನಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಜಯಘೋಷಣೆ ಯೊಂದಿಗೆ ಸಂಭ್ರಮಿಸಿದರು. ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದ ರೀತಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕ ಸಂಘ, ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ಶ್ರೀ ವಿನಾಯಕ ಯುವಕರ ಸಂಘ ಹಾಗೂ ಕಾವೇರಿ ನಗರದ ಗಜಾನನ ಯುವಕ ಸಂಘದವರು ವಿದ್ಯುತ್ ದೀಪಾಲಂಕೃತ ರಥಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮುಖ್ಯ ರಸ್ತೆಯ ಮೂಲಕ ತೆರಳಿ ಗೌರಿಕೆರೆಯಲ್ಲಿ ವಿಸರ್ಜನೆ ನಡೆಸಿದವು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಗಮನ ಸೆಳೆದ ಹುಲಿವೇಷ ಕುಣಿತ

ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ ಕರೆಸಲಾಗಿದ್ದ ಪುತ್ತೂರಿನ ಹುಲಿವೇಷ ಕುಣಿತಗಾರರ ತಂಡ ಬೆಳಿಗ್ಗೆಯಿಂದ ರಾತ್ರಿಯವರೆಗೂ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ರಂಜಿಸಿತು. ತಮಟೆ ವಾದ್ಯಗಳ ನಾದಕ್ಕೆ ಹುಲಿ ವೇಷಧಾರಿಗಳು ಹೆಜ್ಜೆ ಹಾಕುತ್ತ, ಪಲ್ಟಿ ಹೊಡೆಯುತ್ತಾ ರಂಜಿಸಿದರು. ಮರಿ ಹುಲಿ ವೇಷದಾರಿ ಬಾಲಕನ ಕುಣಿತ ನೆರೆದಿದ್ದವರ ಗಮನ ಸೆಳೆಯಿತು.

- ಚಿತ್ರ : ವರದಿ : ಚನ್ನನಾಯಕ

ಕಣಿವೆ ಬಸವನಹಳ್ಳಿ

ಮುಳ್ಳೂರು, ಸೆ. ೧೬: ಸಮೀಪದ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮದ ಗೌರಿ ಗಣೇಶ ಸೇವಾ ಸಮಿತಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಗೌರಿ ಗಣಪತಿ ಮೂರ್ತಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ ನಂತರ ಮೂರ್ತಿಯನ್ನು ವಾಹನದಲ್ಲಿ ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಗ್ರಾಮದೊಳಗೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ತೆರಳಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸುಂಟಿಕೊಪ್ಪ

ಸುಂಟಿಕೊಪ್ಪ, ಸೆ. ೧೬: ಸುಂಟಿಕೊಪ್ಪದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ೬೦ನೇ ವರ್ಷದ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರಷ್ಠಾಪಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮಂಗಳೂರಿನ ನಾಸಿಕ್ ಬ್ಯಾಂಡ್, ಡಿಜೆ ಮತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿ ನಂತರ ಗದ್ದೆಹಳ್ಳದ ಯಂಕನ ಉಲ್ಲಾಸ್, ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಕಳೆದ ೯ ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆಗಳು, ಭಜನೆ ಹಾಗೂ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ತಾ. ೧೫ ರಂದು ಸಂಜೆ ೪ ಗಂಟೆಗೆ ವಿಸರ್ಜನೋತ್ಸವ ಪೂಜೆಯನ್ನು ಭಕ್ತಾದಿಗಳ ಸಮುಖದಲ್ಲಿ ಆರ್ಚಕರುಗಳಾದ ದರ್ಶನ್ ಬಾರಿತ್ತಾಯ, ಮನೋಜ್ ಭಟ್, ಕೃಷ್ಣಭಟ್ ನೇರವೇರಿಸಿದರು. ೯ ದಿನಗಳ ಕಾಲ ಶ್ರೀ ಗೌರಿ ಗಣೇಶನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿತ್ತು. ಸುಂಟಿಕೊಪ್ಪದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಮಹಿಳೆಯರು, ಮಕ್ಕಳು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ತೆರಳಿದ್ದು ವಿಶೇಷವಾಗಿತ್ತು.

ಮದರಸಗಳಲ್ಲಿ ಈದ್‌ಮಿಲಾದ್ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ವಿಸರ್ಜನ ಮೆರವಣಿಗೆಗೆ ತೆರಳುತ್ತಿದ್ದ ಹಿಂದೂಗಳಿಗೆ ತಂಪು ಪಾನೀಯವನ್ನು ವಿತರಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು.

ಈ ಸಂದರ್ಭ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿಘ್ನೇಶ್,÷ ಉಪಾಧ್ಯಕ್ಷರುಗಳಾದ ಬಿ.ಕೆ. ಪ್ರಶಾಂತ್, ಎಂ. ಗಣೇಶ್, ಸಿ. ಸುನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಚ್. ನಿಖಿಲ್, ಖಜಾಂಜಿ ಬಿ.ಡಿ. ಪದ್ಮನಾಭ, ಕಾರ್ಯದರ್ಶಿಗಳಾದ ಎಂ. ಪಾಂಡ್ಯನ್, ಹೃತಿಕ್, ನವೀನ್, ಸಹಕಾರ್ಯದರ್ಶಿಗಳಾದ ಆರ್.ಮಣಿ, ಪಿ.ಕೆ. ಸೂರ್ಯ ಆರ್. ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಎಸ್. ರಾಜೇಶ್, ಬಿ.ಡಿ. ಅಶ್ವತ್, ಹೆಚ್.ಸಿ. ಯೋಗೇಶ್, ಮಧು, ಚೇತನ್, ಶಿವು, ಪುನಿತ್, ಗುಣಶೇಖರ್, ತ್ರಿಜಲ್ ಮಹೇಶ ಸೇರಿದಂತೆ ಸಮಿತಿ ಸದಸ್ಯರು, ಪ್ರಮುಖರು ಹಾಜರಿದ್ದರು.

ಜಿಲ್ಲಾ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ತಾಲೂಕು ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ವೃತ್ತನೀರಿಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು, ರಾಜ್ಯ ಸಶಸ್ತç ಮೀಸಲು ಪಡೆಯ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ದೊಡ್ಡಕುಂದ

ಶನಿವಾರಸAತೆ, ಸೆ. ೧೬: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣೇಶ ಮೂರ್ತಿಗಳನ್ನು ಹೂವು ಹಾಗೂ ಆಕರ್ಷಕ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ನಂದಿಪುರ ಕೆರೆಯಲ್ಲಿ ವಿಸರ್ಜಿಸಲಾಯಿತು. ವಿಸರ್ಜನೋತ್ಸವ ಪ್ರಯುಕ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮಾದಾಪುರ ಎಫ್.ಎಂ.ಸಿ. ಬಡಾವಣೆ

ಮಾದಾಪುರ, ಸೆ. ೧೬: ಇಲ್ಲಿನ ಎಫ್.ಎಂ.ಸಿ. ಬಡಾವಣೆಯ ವಿನಾಯಕ ಮಿತ್ರ ಮಂಡಳಿ ವತಿಯಿಂದ ನಡೆದ ೩ನೇ ವರ್ಷದ ಶ್ರೀ ಗೌರಿ -ಗಣೇಶೋತ್ಸವ ಅದ್ದೂರಿಯಾಗಿ ನೆರವೇರಿತು. ತಾ.೭ಕ್ಕೆ ಶ್ರೀ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ತಾ. ೮ರ ಸಂಜೆ ರಂಗಪೂಜೆ ಏರ್ಪಡಿಸಲಾಗಿತ್ತು.

ತಾ.೯ರಂದು ಮಹಾಪೂಜೆಯ ನಂತರ ಎಫ್.ಎಂ.ಸಿ. ಬಡಾವಣೆ, ಜಂಬೂರು ಬಾಣೆ ಮುಖಾಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್‌ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಗೌರಿ- ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯೊಂದಿಗೆ ತೆರಳಿ ಮಾದಾಪುರ ಹೊಳೆಯಲ್ಲಿ ವಿಸರ್ಜಿಸಲಾಯಿತು. ಮೂರು ದಿನವೂ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.